ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಶಾಸಕ ಅಮಾನತುಲ್ಲಾ ಖಾನ್ ನಿವಾಸದ ಮೇಲೆ ಈಡಿ ದಾಳಿ

Update: 2024-09-02 06:12 GMT

ಅಮಾನತುಲ್ಲಾ ಖಾನ್ (X/@KhanAmanatullah)

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಆಮ್ ಆದ್ಮಿ ಪಕ್ಷದ‌ (ಆಪ್) ಶಾಸಕ ಅಮಾನತುಲ್ಲಾ ಖಾನ್ ಅವರ ನಿವಾಸದ ಮೇಲೆ ದಾಳಿಯನ್ನು ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಮಾನತುಲ್ಲಾ ಖಾನ್ ಬರೆದುಕೊಂಡಿದ್ದು, ನನ್ನನ್ನು ಬಂಧಿಸಲು ʼಈಡಿʼ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದಿಲ್ಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರದ ಆರೋಪವನ್ನು ಅಮಾನತುಲ್ಲಾ ಖಾನ್ ಅವರು ಎದುರಿಸುತ್ತಿದ್ದಾರೆ.

ದಿಲ್ಲಿಯ ಓಖ್ಲಾದಲ್ಲಿ ಖಾನ್ ಅವರ ಮನೆಯ ಹೊರಗೆ ದಿಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ. ಈ ಕುರಿತ ವಿಡಿಯೋದಲ್ಲಿ ಖಾನ್ ಅವರ ನಿವಾಸಕ್ಕೆ ಹೋಗುವ ರಸ್ತೆಗಳಲ್ಲಿ ಭಾರೀ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಮತ್ತು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿರುವುದು ಕಂಡು ಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಅಮಾನತುಲ್ಲಾ ಖಾನ್, ಸರ್ಕಾರವು ತನ್ನನ್ನು ಮತ್ತು ಇತರ ಎಎಪಿ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ʼʼಇಂದು ಬೆಳಗ್ಗೆಯಷ್ಟೇ ಸರ್ವಾಧಿಕಾರಿಯ ಆದೇಶದ ಮೇರೆಗೆ ಆತನ ಕೈಗೊಂಬೆಯಾದ ʼಈಡಿʼ ನನ್ನ ಮನೆಯನ್ನು ತಲುಪಿದೆ. ನನಗೆ ಮತ್ತು ಆಪ್ ನಾಯಕರಿಗೆ ಕಿರುಕುಳ ನೀಡಲು ಸರ್ವಾಧಿಕಾರಿ ತನಗಿರುವ ಯಾವುದೇ ಕೊನೆಯ ಅವಕಾಶವನ್ನು ಕೂಡ ಬಿಡುತ್ತಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ? ಎಂದು ಖಾನ್ ಪ್ರಶ್ನಿಸಿದ್ದಾರೆ.

ಅಮಾನತುಲ್ಲಾ ಖಾನ್ ಅವರ ನಿವಾಸದ ಮೇಲಿನ ದಾಳಿಯನ್ನು ಆಪ್ ನಾಯಕರು ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಆಪ್ ಸಂಸದ ಸಂಜಯ್ ಸಿಂಗ್, ಬಿಜೆಪಿಯ ರಾಜಕೀಯ ದ್ವೇಷದ ಭಾಗವಾಗಿ ಖಾನ್ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

2018 ಮತ್ತು 2022ರ ನಡುವೆ ವಕ್ಫ್ ಬೋರ್ಡ್ ಗೆ ಅಕ್ರಮವಾಗಿ ಸಿಬ್ಬಂದಿಗಳನ್ನು ನೇಮಿಸಿದ್ದಾರೆ ಮತ್ತು ವಕ್ಫ್ ಬೋರ್ಡ್ ಆಸ್ತಿಗಳನ್ನು ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News