ಚುನಾವಣಾ ಬಾಂಡ್: ಗೌಪ್ಯ ಕೋಡ್ ವಿಚಾರದಲ್ಲಿ ತದ್ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ

Update: 2024-03-26 07:01 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಆದೇಶಾನುಸಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಲೆಕ್ಟೋರಲ್‌ ಬಾಂಡ್‌ಗಳ ವಿವರಗಳನ್ನು ಬಿಡುಗಡೆಗೊಳಿಸಿದ ನಂತರದ ಬೆಳವಣಿಗೆಯೊಂದರಲ್ಲಿ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್‌ ಮಹತ್ವವ ಮಾಹಿತಿಯೊಂದನ್ನು ಬಯಲುಗೊಳಿಸಿದ್ದಾರೆ. ಕೇಂದ್ರ ಸರ್ಕಾರ 2018ರಲ್ಲಿ ಹೇಳಿರುವುದಕ್ಕೆ ತದ್ವಿರುದ್ಧವಾಗಿ ಪ್ರತಿ ಬಾಂಡ್‌ ಸ್ಲಿಪ್‌ನಲ್ಲಿರುವ ಅಗೋಚರ ಆಲ್ಫಾನ್ಯೂಮರಿಕ್‌ ಕೋಡ್‌ಗಳನ್ನು ಎಸ್‌ಬಿಐ ಟ್ರ್ಯಾಕ್‌ ಮಾಡಿದೆ ಎಂಬ ಅಂಶವನ್ನು ಅವರು ಎತ್ತಿ ತೋರಿಸಿದ್ದಾರೆ.

ಎಲೆಕ್ಟೋರಲ್‌ ಬಾಂಡ್‌ಗಳಲ್ಲಿರುವ ವಿಶಿಷ್ಟ ಆಲ್ಫಾನ್ಯೂಮರಿಕ್‌ ಕೋಡ್‌ಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ ಬದಲು ಅಲ್ಟ್ರಾವಾಯ್ಲೆಟ್‌ ಕಿರಣಗಳಡಿಯಲ್ಲಿ ಕಾಣಿಸುತ್ತದೆ ಎಂದು 2018ರಲ್ಲಿ ಪತ್ರಕರ್ತೆ ಪೂನಂ ಅಗರ್ವಾಲ್‌ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿಕೆ ಬಿಡುಗಡೆಗೊಳಿಸಿ ಸಂಖ್ಯೆಗಳನ್ನು ಆಧರಿಸಿ ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆಂಬುದನ್ನು ಟ್ರ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಫೋರ್ಜರಿ ತಪ್ಪಿಸಲು ಇದೊಂದು ಭದ್ರತಾ ವೈಶಿಷ್ಟ್ಯ ಎಂದೂ ಸರ್ಕಾರ ಹೇಳಿತ್ತು. ಖರೀದಿದಾರ ಅಥವಾ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಈ ಸಂಖ್ಯೆಯನ್ನು ಟ್ರ್ಯಾಕ್‌ ಮಾಡುವುದಿಲ್ಲ ಎಂದೂ ಸರ್ಕಾರ ಸ್ಪಷ್ಟವಾಗಿ ತಿಳಿಸಿತ್ತು. ಈ ಸಂಖ್ಯೆಯನ್ನು ಎಸ್‌ಬಿಐ ಸರ್ಕಾರ ಅಥವಾ ಬಳಕೆದಾರರ ಸಹಿತ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದೂ ಸರ್ಕಾರ ಹೇಳಿತ್ತು.

ಆದರೆ ಈಗ ಎಸ್‌ಬಿಐ ಬಿಡುಗಡೆಗೊಳಿಸಿರುವ ಡೇಟಾದಿಂದ ಈ ಕೋಡ್‌ ಅನ್ನು ಖರೀದಿದಾರ ಹಾಗೂ ದೇಣಿಗೆ ಪಡೆದವರನ್ನು ನಂಟು ಕಲ್ಪಿಸಲು ಬಳಸಬಹುದಾಗಿದೆ ಎಂದು ತಿಳಿದು ಬಂದಿದೆ ಎಂದು ಅಂಜಲಿ ಭಾರದ್ವಾಜ್‌ ತಮ್ಮ ಎಕ್ಸ್‌ ಪೋಸ್ಟ್‌ಗಳಲ್ಲಿ ಹೇಳಿದ್ದಾರಲ್ಲದೆ ಈ ಎಲೆಕ್ಟೋರಲ್‌ ಬಾಂಡ್‌ ಹಗರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದಿದ್ದಾರೆ.

ಕಂಪೆನಿಗಳು ದೊಡ್ಡ ಮೊತ್ತದ ಬಾಂಡ್‌ ಖರೀದಿಸಿ ನಂತರ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆದಿವೆ ಎಂಬ ಕುರಿತು ಮಾಹಿತಿಗಳು ಈಗ ಹೊರಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಅಗತ್ಯ ಎಂದು ಹೋರಾಟಗಾರರು ಹೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News