ತುರ್ತು ಗರ್ಭನಿರೋಧಕ ಮಾತ್ರೆಗಳಿಗೆ ವೈದ್ಯರ ಚೀಟಿ ಅಗತ್ಯವಿಲ್ಲ: ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆ
ಹೊಸದಿಲ್ಲಿ: ಐ-ಪಿಲ್ ಅಥವಾ ಅನ್‌ವಾಂಟೆಡ್-72ನಂತಹ ತುರ್ತು ಗರ್ಭ ನಿರೋಧಕ ಮಾತ್ರೆ(ಇಸಿಪಿ)ಗಳ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ ಮತ್ತು ಇವುಗಳನ್ನು ಖರೀದಿಗೆ ವೈದ್ಯರ ಚೀಟಿ ಅಗತ್ಯವಿರುವ ಗುಂಪಿಗೆ ಸೇರಿಸಲು ಯಾವುದೇ ಶಿಫಾರಸು ಮಾಡಲಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ)ಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಪ್ರಸ್ತಾವಿತ ಕ್ರಮದ ಕುರಿತು ಇತ್ತೀಚಿನ ಹೇಳಿಕೆಗಳನ್ನು ತಿರಸ್ಕರಿಸಿರುವ ಸಿಡಿಎಸ್‌ಸಿಒ,ತನ್ನ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದೆ.
ತುರ್ತು ಗರ್ಭ ನಿರೋಧಕ ಮಾತ್ರೆಗಳನ್ನು ಸಾಮಾನ್ಯವಾಗಿ ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಗಟ್ಟಲು ಅಗತ್ಯ ಕ್ರಮ ಎಂದು ಪರಿಗಣಿಸಲಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯ 72 ಗಂಟೆಗಳ ಒಳಗೆ ಈ ಮಾತ್ರೆಗಳನ್ನು ಸೇವಿಸಿದರೆ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಸರಕಾರದ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5(2019-2021) ಶೇ.57ರಷ್ಟು ಮಹಿಳೆಯರು ಇಸಿಪಿಗಳನ್ನು ವೈದ್ಯರ ಚೀಟಿಯಿಲ್ಲದೆ ಔಷಧಿ ಅಂಗಡಿಗಳಿಂದ ಖರೀದಿಸಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿದೆ.
ಈ ನಡುವೆ,ಗರ್ಭ ನಿರೋಧಕ ಔಷಧಿಗಳಾದ ಸೆಂಟ್‌ಕ್ರೋಮನ್ ಮತ್ತು ಎಥಿನೈಲೋಸ್ಟ್ರಾಡಿಯಲ್ ಇವು ಪ್ರಸ್ತುತ ಔಷಧಿ ನಿಯಮಗಳ ಶೆಡ್ಯೂಲ್ ‘ಎಚ್’ನಡಿ ಇವೆ ಎಂದು ಸಿಡಿಎಸ್‌ಸಿಒ ತಿಳಿಸಿದೆ. ಅಂದರೆ ಈ ಔಷಧಿಗಳನ್ನು ವೈದ್ಯರ ಚೀಟಿಯಿದ್ದರೆ ಮಾತ್ರ ಮಾರಾಟ ಮಾಡಬಹುದು. ಅಲ್ಲದೆ, ತಯಾರಕರು ಲೇಬಲ್ ಮೇಲೆ ‘ನೋಂದಾಯಿತ ವೈದ್ಯರ ಶಿಫಾರಸು ಚೀಟಿಯಿದ್ದರೆ ಮಾತ್ರ ಈ ಔಷಧಿಯನ್ನು ಚಿಲ್ಲರೆಯಾಗಿ ಮಾರಾಟ ಮಾಡಬೇಕು’ ಎಂದು ಎಚ್ಚರಿಕೆಯನ್ನು ಮುದ್ರಿಸಬೇಕಾಗುತ್ತದೆ.
ಆದರೆ ಈ ಪೈಕಿ ಕೆಲವು ಔಷಧಿಗಳು ಅವುಗಳ ಸಾಮರ್ಥ್ಯಕ್ಕನುಗುಣವಾಗಿ ಔಷಧಿ ನಿಯಮಗಳ ಶೆಡ್ಯೂಲ್ ‘ಕೆ’ ಅಡಿಯಲ್ಲಿಯೂ ಇದ್ದು,ನಿರ್ದಿಷ್ಟ ಸಾಮರ್ಥ್ಯಗಳ ಈ ಔಷಧಿಗಳ ಖರೀದಿಗೆ ವೈದ್ಯರ ಚೀಟಿಯು ಅಗತ್ಯವಿಲ್ಲ. ಆದರೆ ಇತರ ಸಾಮರ್ಥ್ಯಗಳ ಔಷಧಿಗಳ ಖರೀದಿಗೆ ವೈದ್ಯರ ಚೀಟಿಯು ಅಗತ್ಯವಾಗುತ್ತದೆ ಎಂದು ಸಿಡಿಎಸ್‌ಸಿಒ ತಿಳಿಸಿದೆ.