ಚಂದ್ರಯಾನ-3ರ ಉಡಾವಣಾ ಪ್ಯಾಡ್‌ ನಿರ್ಮಿಸಿದ್ದ ಇಂಜಿನಿಯರ್‌ಗಳಿಗೆ ಒಂದು ವರ್ಷದ ವೇತನ ಬಾಕಿ: ವರದಿ

Update: 2023-07-17 10:19 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಚಂದ್ರಾನ್ವೇಷಣೆಯ ಭಾಗವಾಗಿ ಜುಲೈ 14ರಂದು ನಡೆದ ಐತಿಹಾಸಿಕ ಚಂದ್ರಯಾನ-3 ಉಡಾವಣೆಯ ಯಶಸ್ಸಿಗೆ ಇಡೀ ಜಗತ್ತೇ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಈ ಯೋಜನೆಗಾಗಿ ಉಡಾವಣಾ ವೇದಿಕೆ ನಿರ್ಮಿಸಿದ ಇಂಜಿನಿಯರ್‌ಗಳಿಗೆ ಕಳೆದ ಒಂದು ವರ್ಷದಿಂದ ವೇತನವನ್ನೇ ಪಾವತಿಸಿಲ್ಲ ಎಂದು ವರದಿಯಾಗಿದೆ.

ರಾಂಚಿಯ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಗೆ ಕಳೆದ 17 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಬಳ ಪಾವತಿಯಾಗದ ಸಮಸ್ಯೆಯ ಹೊರತಾಗಿಯೂ ನಿಗದಿತ ಚಂದ್ರಯಾನ-3 ಉಡಾವಣೆಯ ದಿನಾಂಕಕ್ಕೂ ಮುಂಚಿತವಾಗಿಯೇ ಡಿಸೆಂಬರ್, 2022ರಲ್ಲಿ ಈ ಸಂಸ್ಥೆಯು ಸಂಚಾರಿ ಉಡಾವಣಾ ವೇದಿಕೆ ಹಾಗೂ ಇನ್ನಿತರ ಅತ್ಯಗತ್ಯ ಮತ್ತು ಸಂಕೀರ್ಣ ಸಾಧನಗಳನ್ನು ಪೂರೈಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಭಾರಿ ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಾಂಚಿಯ ಧುವ್ರಾದಲ್ಲಿದೆ. ಕಳೆದ ಒಂದು ವರ್ಷದಿಂದ ಈ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ವರ್ಷದ ಮೇ ತಿಂಗಳಲ್ಲಿ Frontline ಪತ್ರಿಕೆಯು, ಈ ಸಂಸ್ಥೆಯ 2,700 ನೌಕರರು ಹಾಗೂ 450 ಅಧಿಕಾರಿಗಳಿಗೆ ಕಳೆದ 14 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ IANS ಸುದ್ದಿ ಸಂಸ್ಥೆಯು ಈ ಸಂಸ್ಥೆಯ ಅಧಿಕಾರಿಗಳು ವರ್ಷಪೂರ ವೇತನ ಸ್ವೀಕರಿಸಿಲ್ಲ ಹಾಗೂ ನೌಕರರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ರಕ್ಷಣಾ ಸಚಿವಾಲಯ, ರೈಲ್ವೆ, ಕೋಲ್ ಇಂಡಿಯಾ ಹಾಗೂ ಉಕ್ಕು ವಲಯಗಳಿಂದ ರೂ. 1,500 ಮೌಲ್ಯದ ಕಾರ್ಯಾದೇಶವಿದ್ದರೂ, ನಿಧಿಯ ಕೊರತೆಯಿಂದಾಗಿ ಈ ಕಾರ್ಯಾದೇಶದ ಶೇ. 80ರಷ್ಟು ಕೆಲಸಗಳು ಇನ್ನೂ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಚಂದ್ರಯಾನ-3ರ ಯಶಸ್ವಿ ಉಡಾವಣೆಯನ್ನು ಸಂಭ್ರಮಿಸಿದ ತಂತ್ರಜ್ಞರ ಪೈಕಿ ಒಬ್ಬರಾಗಿದ್ದ ಸುಭಾಶ್‌ ಚಂದ್ರ, "ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಸಿಬ್ಬಂದಿಗಳು ತಮ್ಮ ತಲೆಯನ್ನು ಮತ್ತೆ ಹೆಮ್ಮೆಯಿಂದ ಮೇಲೆತ್ತಿದ್ದಾರೆ. ದೇಶದ ಈ ಮಹತ್ವದ ಯೋಜನೆಯಲ್ಲಿ ನಾವೂ ಪಾಲುದಾರರಾಗಿರುವುದಕ್ಕೆ ನಮಗೆ ಖುಶಿಯಾಗುತ್ತಿದೆ" ಎಂದು ಹೇಳಿದ್ದಾರೆ.

ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ತನಗೆ ರೂ. 1,000 ಕೋಟಿ ಉತ್ಪಾದನಾ ಬಂಡವಾಳ ಒದಗಿಸುವಂತೆ ಭಾರಿ ಕೈಗಾರಿಕೆಗಳ ಸಚಿವಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ಯಾವುದೇ ನೆರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸಚಿವಾಲಯವು ಪ್ರತ್ಯುತ್ತರ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದು ಮಾತ್ರವಲ್ಲದೆ, ಕಳೆದ ಎರಡೂವರೆ ವರ್ಷಗಳಲ್ಲಿ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿಯನ್ನೇ ಮಾಡಿಲ್ಲ.

ಚಂದ್ರಯಾನ-3 ಯೋಜನೆಯ ನಿರ್ಮಾಣ ವೆಚ್ಚವು ಸುಮಾರು ರೂ. 600 ಕೋಟಿ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News