ಅಗ್ರ ಬ್ಯಾಟ್ಸ್‌ಮನ್‌ಗಳ ವೈಫಲ್ಯ: ಸೋಲಿನ ಸುಳಿಯಲ್ಲಿ ಭಾರತ

Update: 2024-12-30 02:18 GMT

PC: TOI

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಬಾಕ್ಸಿಂಗ್ ಡೇ ಟೆಸ್ಟ್ ನ ಐದನೇ ದಿನವೂ ಮುಂದುವರಿದಿದ್ದು, ಗೆಲುವಿಗೆ 340 ರನ್ ಗಳ ಗುರಿ ಪಡೆದಿರುವ ಭಾರತ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಉಭಯ ತಂಡಗಳಿಗೆ ನಿರ್ಣಾಯಕ ಕದನ ಎನಿಸಿರುವ ಈ ಟೆಸ್ಟ್ ನಲ್ಲಿ ಗೆಲುವಿಗಾಗಿ ಉಳಿದ ಎರಡು ಸೆಷನ್ ಗಳಿಂದ ಆಸ್ಟ್ರೇಲಿಯಾ ಏಳು ವಿಕೆಟ್ ಪಡೆಯಬೇಕಿದೆ. ಇನ್ನೂ 307 ರನ್ ಗಳಿಸಬೇಕಿರುವ ಭಾರತಕ್ಕೆ ಗೆಲುವು ಮರೀಚಿಕೆ ಎನಿಸಿದೆ.

ಮೊದಲ ಸೆಷನ್ ನಲ್ಲಿ ಆಸ್ಟ್ರೇಲಿಯಾ ಬೌಲರ್ ಗಳು ಪ್ರಾಬಲ್ಯ ಮೆರೆದರು. ಅಗ್ರ ಕ್ರಮಾಂಕದ ಬ್ಯಾಟರ್ ಗಳಾದ ರೋಹಿತ್ ಶರ್ಮಾ (9) ಮತ್ತು ಕೆ.ಎಲ್.ರಾಹುಲ್ (0) ಅವರ ವಿಕೆಟನ್ನು ನಾಯಕ ಪ್ಯಾಟ್ ಕಮಿನ್ಸ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್, ಅನುಭವಿ ಆಟಗಾರ ವಿರಾಟ್ ಕೊಹ್ಲಿಯವರಿಗೆ ಪೆವಿಲಿಯನ್ ದಾರಿ ತೋರಿಸಿದರು. 25 ರನ್ ಗಳಿಗೆ 2 ವಿಕೆಟ್ ಗಳನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದ ಭಾರತ ಮತ್ತೆ ಎಂಟು ರನ್ ಸೇರಿಸುವಷ್ಟರಲ್ಲಿ ವಿರಾಟ್ ಕೊಹ್ಲಿಯವರ ವಿಕೆಟ್ ಕಳೆದುಕೊಂಡಿತು. 14 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಲಿಯಾನ್ (41) ಅವರ ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬೂಮ್ರಾ, ಆಸ್ಟ್ರೇಲಿಯ ಇನಿಂಗ್ಸ್ ಗೆ ಮಂಗಳ ಹಾಡಿದರು. ಕೊನೆಯ ವಿಕೆಟ್ ಗೆ ಲಿಯಾನ್- ಬೊಲಾಂಡ್ ಜೋಡಿ 61 ರನ್ ಗಳನ್ನು ಸೇರಿಸುವ ಮೂಲಕ ಆಸ್ಟ್ರೇಲಿಯಾದ ಮುನ್ನಡೆ ಹಿಗ್ಗಿಸಿದರು. 15 ರನ್ ಗಳಿಸಿದ ಬೊಲಾಂಡ್ ಔಟಾಗದೇ ಉಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News