ಪಟಾಕಿ ಹಚ್ಚುವ ಕುರಿತು ಜಗಳ: ತಂದೆ, ಪುತ್ರನನ್ನು ಇರಿದು ಹತ್ಯೆಗೈದ ಗುಂಪು

Update: 2023-11-13 17:31 GMT

ಸಾಂದರ್ಭಿಕ ಚಿತ್ರ - Photo : PTI 

ಅಹಮದಾಬಾದ್: ಪಟಾಕಿ ಹಚ್ಚುವ ಕುರಿತಂತೆ ನಡೆದ ಜಗಳದದಲ್ಲಿ ಓರ್ವ ವ್ಯಕ್ತಿ ಮತ್ತು ಆತನ 18 ವರ್ಷದ ಪುತ್ರನನ್ನು ಗುಂಪೊಂದು ಇರಿದು ಹತ್ಯೆಗೈದಿದ್ದು, ಮತ್ತೋರ್ವನನ್ನು ಗಾಯಗೊಳಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಗರದಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ರವಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ನಗರದ ರಾಮೋಲ್ ವಸತಿ ಪ್ರದೇಶವೊಂದರಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಟೊ ರಿಕ್ಷಾ ಚಾಲಕ ವಿಜಯ್ ಶಂಕರ್ ಭನ್ಸಿಲಾಲ್ (44) ಹಾಗೂ ಅವರ ಪುತ್ರ ಧಿರೇಂದ್ರ ಸಿಂಗ್ ಗೆ ಆರೋಪಿಗಳು ಮಾರಣಾಂತಿಕವಾಗಿ ಇರಿದಿದ್ದಾರೆ. ಈ ಸಂದರ್ಭದಲ್ಲಿ ದಾಳಿಯನ್ನು ತಪ್ಪಿಸಲು ಮಧ್ಯಪ್ರವೇಶಿಸಿದ ಅವರ ಸೋದರಳಿಯ ಕೂಡಾ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಎಫ್‌ ಐ ಆರ್ ಉಲ್ಲೇಖಿಸಿ ರಾಮೋಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭನ್ಸಿಲಾಲ್ ಪತ್ನಿ ದಾಖಲಿಸಿರುವ ದೂರಿನ ಪ್ರಕಾರ, ಆರೋಪಿಗಳು ಆಟೋರಿಕ್ಷಾ ಚಾಲಕನೇ ಆಗಿರುವ ತನ್ನ ಮೈದುನನೊಂದಿಗೆ ಎರಡು ದಿನಗಳ ಹಿಂದೆ ಜಗಳ ನಡೆಸಿದ್ದರು ಎಂದು ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನರು ಕೂಗಾಡುತ್ತಿರುವುದನ್ನು ಕೇಳಿಸಿಕೊಂಡ ಭನ್ಸಿಲಾಲ್, ಅವರ ಪತ್ನಿ, ಪುತ್ರ ಹಾಗೂ ಸೋದರಳಿಯ ಮನೆಯ ಹೊರಗೆ ದೌಡಾಯಿಸಿ ಬಂದಿದ್ದಾರೆ. ಆಗ ಕೆಲ ದಿನಗಳ ಹಿಂದೆ ಅವರ ಸಂಬಂಧಿಯೊಂದಿಗೆ ನಡೆದಿದ್ದ ಜಗಳವನ್ನು ಪ್ರಸ್ತಾಪಿಸಿರುವ ಆರೋಪಿಗಳು, ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಧಿರೇಂದ್ರ ಸಿಂಗ್ ಗೆ ದೀಪಕ್ ಮರಾಠಿ ಎಂಬ ಆರೋಪಿಯು ಚಾಕುವಿನಿಂದ ಇರಿದಿದ್ದಾನೆ. ಆಗ ತನ್ನ ಪುತ್ರನನ್ನು ರಕ್ಷಿಸಲು ಧಾವಿಸಿರುವ ಭನ್ಸಿಲಾಲ್ ಅವರಿಗೂ ಇತರ ಆರೋಪಿಗಳು ಚಾಕುವಿನಿಂದ ನಾಲ್ಕು ಬಾರಿ ಇರಿದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೂಡಲೇ ಸಂತ್ರಸ್ತರನ್ನು ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ, ಅಲ್ಲಿ ತಂದೆ, ಪುತ್ರ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆಯಲ್ಲಿ ಗಾಯಗೊಂಡಿದ್ದ ಅವರ ಸಂಬಂಧಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News