“ಪ್ರತಿಭಟನೆಯ ವರದಿ ಮಾಡುವುದು ಅಪರಾಧವಲ್ಲ”: ಕೇರಳದ ಪತ್ರಕರ್ತೆಯ ವಿರುದ್ಧ ಎಫ್‌ಐಆರ್‌ ಗೆ ಎಡಿಟರ್ಸ್‌ ಗಿಲ್ಡ್‌ ಖಂಡನೆ

Update: 2023-12-30 06:59 GMT

ವಿನೀತಾ ವಿಜಿ (Photo: Facebook)

ತಿರುವನಂತಪುರಂ: ಎರ್ನಾಕುಳಂ ಜಿಲ್ಲೆಯ ಒಡಕ್ಕಲಿ ಗ್ರಾಮದಲ್ಲಿ ಡಿ.10ರಂದು ನಡೆದ ವಿದ್ಯಾರ್ಥಿ ಯೂನಿಯನ್‌ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳದ ಸುದ್ದಿ ವಾಹಿನಿ 24 ನ್ಯೂಸ್‌ ಇದರ ವರದಿಗಾರ್ತಿ ವಿನೀತಾ ವಿಜಿ ವಿರುದ್ಧ ಪೊಲೀಸ್‌ ಕ್ರಮವನ್ನು ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಟೀಕಿಸಿದೆ. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ಸ್ಟೂಡೆಂಟ್ಸ್‌ ಯೂನಿಯನ್‌ನ ಕೆಲ ಸದಸ್ಯರ ವಿರುದ್ಧ ದಾಖಲಾದ ಪ್ರಕರಣದಲ್ಲಿ ವಿನೀತಾ ವಿಜಿ ಅವರ ಹೆಸರೂ ಇದೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತವರ ಕೆಲ ಸಂಪುಟ ಸಹೋದ್ಯೋಗಿಗಳಿದ್ದ ಬಸ್ಸಿನತ್ತ ಚಪ್ಪಲಿಗಳನ್ನೆಸೆದ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ.

ಯೂನಿಯನ್‌ನ ರಾಜ್ಯ ಪದಾಧಿಕಾರಿಗಳಾದ ಬೇಸಿಲ್‌ ಪಿ ಮತ್ತು ಹೋರಾಟಗಾರರಾದ ದೇವಕುಮಾರ್‌ ಟಿ, ಜಿಬಿನ್‌ ಮ್ಯಾಥ್ಯೂ ಮತ್ತು ಜೈಡೆನ್‌ ಜಾನ್ಸನ್‌ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ವಿನೀತಾ ವಿಜಿ ಅವರನ್ನು ಕ್ರಿಮಿನಲ್‌ ಸಂಚು ಹೂಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ.

“ಯಾವುದೇ ರೀತಿಯ ಹಿಂಸೆಯನ್ನು ಎಡಿಟರ್ಸ್‌ ಗಿಲ್ಡ್‌ ಬೆಂಬಲಿಸುವುದಿಲ್ಲವಾದರೂ ವರದಿಗಾರರ ವಿರುದ್ಧದ ಪೊಲೀಸ್‌ ಕ್ರಮವನ್ನು ಖಂಡಿಸುತ್ತದೆ. ಪ್ರತಿಭಟನೆಗಳ ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿ ಮತ್ತು ಅಪರಾಧವಲ್ಲ, ವರದಿಗಾರರೊಬ್ಬರು ಪ್ರತಿಭಟನಾ ಸ್ಥಘಳದಲ್ಲಿದ್ದರೆಂಬ ಮಾತ್ರಕ್ಕೆ ಪ್ರತಿಭಟನೆಯ ವೇಳೆ ನಡೆದ ಯಾವುದೇ ಅಹಿತಕರ ಘಟನೆಗೆ ಅವರೂ ಕಾರಣರೆಂದು ತಿಳಿಯಲಾಗದು,” ಎಂದು ಎಡಿಟರ್ಸ್‌ ಗಿಲ್ಡ್‌ ಹೇಳಿದೆ.

ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸ್‌ ಇಲಾಖೆಗೆ ಸೂಚಿಸುವಂತೆ ಗಿಲ್ಡ್‌ ಸರ್ಕಾರವನ್ನು ಕೋರಿದೆ.

ಪಿಣರಾಯಿ ವಿಜಯನ್‌ ನೇತೃತ್ವದ ʼನವಕೇರಳ ಸದಸ್‌ ಕ್ಯಾಬಿನೆಟ್‌ʼ ಪ್ರವಾಸದ ವೇಳೆ ಘಟನೆ ನಡೆದಿತ್ತು. ಒಂದು ಚಪ್ಪಲಿ ಬಸ್ಸಿಗೆ ಅಪ್ಪಳಿಸಿದ್ದರೆ ಇನ್ನೊಂದು ಭದ್ರತಾ ಬೆಂಗಾವಲು ವಾಹನದ ವಿಂಡ್‌ಶೀಲ್ಡ್‌ಗೆ ಬಡಿದಿತ್ತು.

ಬಸ್ಸಿನತ್ತ ಚಪ್ಪಲಿ ಎಸೆಯಲಾಗುವುದೆಂಬ ಕುರಿತು ವರದಿಗಾರ್ತಿಗೆ ಮುಂಚಿತವಾಗಿಯೇ ಗೊತ್ತಿತ್ತು, ಈ ಕುರಿತು ಅವರು ಕಾನೂನು ಜಾರಿ ಏಜನ್ಸಿಗಳಿಗೆ ಮಾಹಿತಿ ನೀಡಬೇಕಿತ್ತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News