ಕೇರಳದಲ್ಲಿ ಮೀನುಗಳ ಮಾರಣ ಹೋಮ: ತನಿಖೆ ಆರಂಭ
ಕೊಚ್ಚಿನ್: ಪೆರಿಯಾರ್ ನದಿಗೆ ಎಡಯಾರ್ ಪ್ರದೇಶದಲ್ಲಿ ಕೈಗಾರಿಕೆಗಳಿಂದ ರಾಸಾಯನಿಕವನ್ನು ಹರಿಸಿದ ಪರಿಣಾಮ ಮೀನುಗಳ ಮಾರಣಹೋಮವಾಗಿದೆ ಎಂಬ ಆರೋಪಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೀನುಗಾರರೊಬ್ಬರು ನೀಡಿದ ದೂರನ್ನು ಆಧರಿಸಿ ತನಿಖೆ ಆರಂಭಿಸಲಾಗಿದೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 277ರ ಅನ್ವಯ ಮತ್ತು 427ರ ಅನ್ವಯ ಸಾರ್ವಜನಿಕ ತೊರೆ ಮತ್ತು ಜಲಾಶಯಗಳನ್ನು ಮಲಿನ ಮಾಡಿದ ಅರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಕಡಮಕುಡಿಯ ಸ್ಟ್ಯಾನ್ಲಿ ಡಿಸಿಲ್ವಾ ಎಂಬುವವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪೊಲೀಸ್ ತನಿಖೆಗೆ ಇರುವ ಅವಕಾಶದ ಬಗ್ಗೆ ಕಾನೂನು ತಜ್ಞರ ನೆರವು ಪಡೆದು ಪ್ರಕರಣ ದಾಖಲಿಸಲಾಗಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತನಿಖೆಯ ಅಂಗವಾಗಿ ಮೀನುಗಳ ಸಾವಿನ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ. ಮೀನುಗಾರ ಮತ್ತು ವಿವಿಧ ಏಜೆನ್ಸಿಗಳು ಸಂಗ್ರಹಿಸಿದ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗುವುದು. ಎಡಗಾರ್ ಪ್ರದೇಶದ ಕೈಗಾರಿಕೆಗಳಿಂದ ಮಾಲಿನ್ಯಕಾರಕ ರಾಸಾಯನಿಕಗಳು ನದಿಗೆ ಹರಿದಿದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.