ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

Update: 2024-01-15 02:59 GMT

Photo: ANI

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರು ಸುಮಾರು 11 ಗಂಟೆ ಕಾಲ ದಟ್ಟ ಮಂಜು ಮುಸುಕಿದ್ದರಿಂದ ವಿಮಾನ ಹಾಗೂ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಮಂದಿ ಪ್ರಯಾಣಿಕರು ಅತಂತ್ರರಾಗಿ ನಿಲ್ದಾಣಗಳಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಮಧ್ಯರಾತ್ರಿ 12.30ರ ವೇಳೆಗೆ ಗೋಚರತೆ 200 ಮೀಟರ್‍ಗಿಂತಲೂ ಕಡಿಮೆಯಾಗಿತ್ತು. ಇದು ಮತ್ತಷ್ಟು ಕುಸಿದು ಮುಂಜಾನೆ 3 ಗಂಟೆಯಿಂದ 10.30ರವರೆಗೆ ಅಂದರೆ ಸುಮಾರು ಏಳೂವರೆ ಗಂಟೆ ಕಾಲ ಶೂನ್ಯವಾಗಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ 400ಕ್ಕೀಊ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಯಿತು. 10 ವಿಮಾನಗಳನ್ನು ಬೇರೆಡೆಗೆ ವರ್ಗಾಯಿಸಿದರೆ, 20ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಪಡಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಾಹ್ನ 12 ರಿಂಧ ಸಂಜೆ 5ರವರೆಗೆ ಬಿಸಿಲಿನಿಂದಾಗಿ ಸ್ವಲ್ಪಮಟ್ಟಿಗೆ ಗೋಚರತೆ ಪ್ರಮಾಣ ಸುಧಾರಿಸಿದರೂ, ಇದಕ್ಕೂ ಮುನ್ನ ಸಂಚರಿಸಬೇಕಾದ ವಿಮಾನಗಳು ವಿಳಂಬವಾಗಿದ್ದರಿಂದ ಇಡೀ ದಿನ ವಿಳಂಬ ಮುಂದುವರಿಯಿತು. ದಟ್ಟ ಮಂಜಿನ ಕಾರಣದಿಂದ 10 ವಿಮಾನಗಳನ್ನು ಜೈಪುರ ನಿಲ್ದಾಣಕ್ಕೆ ವಿಮುಖಗೊಳಿಸಲಾಯಿತು. ಇಲ್ಲಿ ಕೂಡಾ ಗೋಚರತೆ ಪ್ರಮಾಣ ತೀರಾ ಕಡಿಮೆ ಇತ್ತು ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ ರಾಜಧಾನಿಯಿಂದ ಕಾರ್ಯಾಚರಿಸಲ್ಪಡುವ 22 ರೈಲುಗಳ ಸಂಚಾರ ಕೂಡ ಒಂದು ಗಂಟೆಗಿಂತ ಹೆಚ್ಚು ವಿಳಂಬವಾಗಿದೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ವಿಳಂಬವಾದ ರೈಲುಗಳ ಪಟ್ಟಿಯಲ್ಲಿ ಪುರಿ- ಹೊಸದಿಲ್ಲಿ ಪುರುಷೋತ್ತಮ ಎಕ್ಸ್‍ಪ್ರೆಸ್, ಕಾನ್ಪುರ- ಹೊಸದಿಲ್ಲಿ ಶ್ರಮಶಕ್ತಿ ಎಕ್ಸ್‍ಪ್ರೆಸ್ ರೈಲುಗಳು ಸೇರಿವೆ. ಸೋಮವಾರ ಕೂಡಾ ದಟ್ಟ ಮಂಜಿನ ವಾತಾವರಣ ಇರಲಿದೆ ಎಂದು ಐಎಂಡಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News