ಮೈತೈಗಳ ‘ಮಾನಹಾನಿ’ಗಾಗಿ ಕ್ಷಮೆ ಕೋರುವಂತೆ ಮಾಜಿ ಪೊಲೀಸ್ ಅಧಿಕಾರಿಯನ್ನು ಬಲವಂತಗೊಳಿಸಿದ ತೀವ್ರಗಾಮಿ ಗುಂಪುಗಳು

Update: 2023-10-06 12:21 GMT

photo courtesy : thewire.in

ಇಂಫಾಲ,ಅ.6: ಮಣಿಪುರದ ತೀವ್ರಗಾಮಿ ಸಂಘಟನೆಗಳಾದ ಮೈತೈ ಲೀಪನ್ ಮತ್ತು ಅರಂಬೈ ಟೆಂಗಲ್‌ನ ಸದಸ್ಯರು ಮೈತೈ ಸಮುದಾಯದ ಮಾನಹಾನಿಯನ್ನು ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಮಾನವ ಹಕ್ಕುಗಳ ಕಾರ್ಯಕರ್ತ ಬಬ್ಲೂ ಲಾಯ್ಟಂಗ್‌ಬಾಮ್ ಮತ್ತು ಮಾಜಿ ಮಣಿಪುರ ಪೊಲೀಸ್ ಸೇವೆಗಳ (ಎಂಪಿಎಸ್) ಅಧಿಕಾರಿ ಥೌನಾವಜಮ್ ಬೃಂದಾ ಅವರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮೌನವಾಗಿರುವಂತೆ ಮತ್ತು ಯಾವುದೇ ಮಾಧ್ಯಮ ಸಂಸ್ಥೆಗೆ ಸಂದರ್ಶನಗಳನ್ನು ನೀಡದಂತೆ ಈ ಗುಂಪುಗಳು ಅವರಿಬ್ಬರನ್ನೂ ಒತ್ತಾಯಿಸಿದವು. ಸ್ವತಃ ಮೈತೈಗಳಾಗಿರುವ ಬಬ್ಲೂ ಮತ್ತು ಬೃಂದಾ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರ ಟೀಕಾಕಾರರಾಗಿದ್ದಾರೆ ಎಂದು thewire.in ವರದಿ ಮಾಡಿದೆ.

ಬಬ್ಲೂ ಅವರ ಮನೆಗೆ ಹಾನಿಯನ್ನುಂಟು ಮಾಡಿದ ಗುಂಪುಗಳು ಮರದ ಕುರ್ಚಿಯನ್ನು ಬಳಸಿ ಅವರ ಕಾರಿನ ವಿಂಡ್‌ಶೀಲ್ಡ್ ಮತ್ತು ಕಿಟಕಿ ಗಾಜನ್ನು ಒಡೆದುಹಾಕಿದ್ದಾರೆ.

ಈ ನಡುವೆ ಬೃಂದಾ ಅವರ ನಿವಾಸದಲ್ಲಿ ಗುಂಪು ಮೈತೈ ಲೀಪನ್, ಅರಂಬೈ ಟೆಂಗಲ್ ಮತ್ತು ಇಡೀ ಮೈತೈ ಸಮುದಾಯದ ಕ್ಷಮೆ ಯಾಚಿಸುವಂತೆ ಮತ್ತು ಅದನ್ನು ಸ್ವತಃ ದಾಖಲಿಸುವಂತೆ ಅವರನ್ನು ಒತ್ತಾಯಿಸಿತ್ತು. ಕ್ಷಮೆ ಯಾಚಿಸುವಂತೆ ಬೃಂದಾರನ್ನು ಬಲವಂತಗೊಳಿಸಿದ್ದ ಗುಂಪು, ನಿರಾಕರಿಸಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಒಡ್ಡಿದ್ದನ್ನು ಸುದ್ದಿಸಂಸ್ಥೆಗೆ ಲಭ್ಯವಾಗಿರುವ ವೀಡಿಯೊ ತೋರಿಸಿದೆ. ಮೇ 3ರಿಂದ ತಾವು ಮೈತೈಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದೇವೆ ಎಂದು ಗುಂಪು ವೀಡಿಯೊದಲ್ಲಿ ಹೇಳಿಕೊಂಡಿದೆ.

ಇದರ ಜೊತೆಗೆ ಮೈತೈ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ಬೃಂದಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಣಿಪುರ ಬಿಜೆಪಿ ಯುವ ಘಟಕದ ಅಧ್ಯಕ್ಷ ಮನೋಹರಮಯುಮ್ ಬಾರಿಷ್ ಶರ್ಮಾ ರಾಜ್ಯ ಪೋಲಿಸರನ್ನು ಆಗ್ರಹಿಸಿದ್ದಾರೆ.

ಶರ್ಮಾ ಇಂಫಾಲ ಪಶ್ಚಿಮ ಜಿಲ್ಲೆಯ ಎಸ್‌ಪಿಗೆ ಬರೆದಿರುವ ಪತ್ರದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರ ಸಲಹೆಯ ಮೇರೆಗೆ ಮೈತೈ ಲೀಪನ್ ಮತ್ತು ಅರಂಬೈ ಟೆಂಗಲ್ ಪ್ರಚೋದಿಸಿದ್ದವು ಎಂದು ಬೃಂದಾ ಹೇಳುತ್ತಿರುವ ಆಡಿಯೋ ರೆಕಾರ್ಡಿಂಗ್‌ನ್ನು ಉಲ್ಲೇಖಿಸಿದ್ದಾರೆ. ಬೃಂದಾ ಬೀರೇನ್ ಸಿಂಗ್ ಮತ್ತು ರಾಜ್ಯ ಸರಕಾರದ ಸಾರ್ವಜನಿಕ ವರ್ಚಸ್ಸಿಗೆ ಕುಂದನ್ನುಂಟು ಮಾಡುವ ಮೂಲಕ ಸರಿಪಡಿಸಲಾಗದ ಹಾನಿಗೆ ಕಾರಣರಾಗಿದ್ದಾರೆ ಎಂದೂ ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಕುಕಿ-ಝೋಗಳು ಬಹುಸಂಖ್ಯಾಕರಾಗಿರುವ ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ದಾಖಲಾಗಿರುವ ಹಲವಾರು ಎಫ್‌ಐಆರ್‌ಗಳಲ್ಲಿ ಮೈತೈ ಲೀಪನ್ ಮತ್ತು ಅರಂಭೈ ಟೆಂಗಲ್ ಗುಂಪುಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಗುಂಪುಗಳು ಹಿಂಸಾಚಾರದಲ್ಲಿ ತೊಡಗಿವೆ ಎಂದು ಬುಡಕಟ್ಟು ಸಮುದಾಯಗಳ ಹಲವಾರು ಸದಸ್ಯರು ಆರೋಪಿಸಿದ್ದಾರೆ.

ಇತ್ತೀಚಿಗೆ ಸುದ್ದಿ ಜಾಲತಾಣ ದಿ ವೈರ್‌ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಬೃಂದಾ ಬೀರೇನ್ ಸಿಂಗ್ ರಾಜ್ಯದಲ್ಲಿಯ ಮಾದಕ ದ್ರವ್ಯ ಕೂಟದ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದರು. 2018ರಲ್ಲಿ ಸಂವೇದನಾಶೀಲ ಮಾದಕ ದ್ರವ್ಯ ಪ್ರಕರಣವನ್ನು ಕೈಬಿಡುವಂತೆ ತನ್ನ ಮೇಲೆ ಹೇಗೆ ಒತ್ತಡ ಹೇರಲಾಗಿತ್ತು ಎನ್ನುವುದನ್ನೂ ಅವರು ವಿವರಿಸಿದ್ದರು.

ಬೀರೇನ್ ಸಿಂಗ್ ಅಧಿಕಾರದಲ್ಲಿ ಇರುವವರೆಗೆ ಮಣಿಪುರದಲ್ಲಿ ಶಾಂತಿ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿಲ್ಲ. ಬಿಜೆಪಿ ಅವರನ್ನು ಮೊದಲು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಬಬ್ಲೂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News