ಇಸ್ರೋ ವೆಚ್ಚ ಮಾಡುವ ಪ್ರತಿ ರೂಪಾಯಿಗೆ 2.5 ರೂಪಾಯಿ ಪ್ರತಿಫಲ!
ಹೊಸದಿಲ್ಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಪ್ರತಿ ರೂಪಾಯಿ ಹೂಡಿಕೆಗೆ ಪ್ರತಿಯಾಗಿ ಸಮಾಜಕ್ಕೆ ಕನಿಷ್ಠ 2.5 ರೂಪಾಯಿ ಪ್ರತಿಫಲ ದೊರಕಿರುವುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಪ್ರಕಟಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಈ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ಅವರು, ದೇಶಕ್ಕೆ ಸೇವೆ ಸಲ್ಲಿಸುವುದು ಇಸ್ರೋದ ಗುರಿಯೇ ವಿನಃ ಬಾಹ್ಯಾಕಾಶ ವಲಯದಲ್ಲಿ ಇತರ ದೇಶಗಳ ಜತೆ ಸ್ಪರ್ಧಿಸಿ ಪ್ರಾಬಲ್ಯ ಮೆರೆಯುವುದಲ್ಲ ಎಂದು ಸ್ಪಷ್ಟಪಡಿಸಿದರು. "ಚಂದ್ರಯಾನ ಅತ್ಯಂತ ದುಬಾರಿ ವ್ಯವಹಾರ; ಇದಕ್ಕೆ ಕೇವಲ ಸರ್ಕಾರಿ ನೆರವನ್ನು ಮಾತ್ರವೇ ನಾವು ಅವಲಂಬಿಸುವಂತಿಲ್ಲ. ನಾವು ವ್ಯವಹಾರ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ನಾವು ಸುಸ್ಥಿರವಾಗಿ ಮುಂದುವರಿಯಬೇಕಾದರೆ, ಅದರ ಬಳಕೆಯನ್ನು ನಾವು ಸೃಷ್ಟಿಸಬೇಕು. ಇಲ್ಲದಿದ್ದರೆ, ಒಂದಷ್ಟು ಸಾಧನೆ ಮಾಡಿದ ಬಳಿಕ ಸರ್ಕಾರ ನಿಮ್ಮನ್ನು ಮುಚ್ಚುವಂತೆ ಸೂಚಿಸಬಹುದು" ಎಂದು ವಿಶ್ಲೇಷಿಸಿದರು.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಸಾಮಾಜಿಕ-ಆರ್ಥಿಕ ಪರಿಣಾಮಗಳ ವಿಶ್ಲೇಷಣೆಯನ್ನು ಉಲ್ಲೇಖಿಸಿದ ಅವರು, ಇಸ್ರೋ ಸಂಸ್ಥೆ ಯೂರೋಪಿಯನ್ ಬಾಹ್ಯಾಕಾಶ ಸಲಹಾ ಸಂಸ್ಥೆ ನೊವಾಸ್ಪೇಸ್ ಸಹಯೋಗದಲ್ಲಿ, ಇಸ್ರೋ ಕಾರ್ಯಕ್ರಮಗಳ ಪ್ರಯೋಜನಗಳ ಅಧ್ಯಯನ ನಡೆಸಿದೆ. ಈ ಅಧ್ಯಯನ ವರದಿ ಡಾಲರ್‍ಗಳಲ್ಲಿ ಪ್ರತಿಫಲವನ್ನು ಲೆಕ್ಕ ಹಾಕಿದೆ. ಕೇಂದ್ರ ಬಾಹ್ಯಾಕಾಶ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಈ ವರದಿ ಬಿಡುಗಡೆ ಮಾಡಿದ್ದು, ಇದರ ಪ್ರಕಾರ 2014 ರಿಂದ 2024ರ ಅವಧಿಯಲ್ಲಿ ಇಸ್ರೋ ಭಾರತದ ಜಿಡಿಪಿಗೆ 60 ಶತಕೋಟಿ ಡಾಲರ್ ಕೊಡುಗೆ ನೀಡಿದೆ ಎಂದು ವಿವರಿಸಿದರು. ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಗಳಿಸಿದ ಪ್ರತಿ ಡಾಲರ್‍ನಿಂದ ಭಾರತೀಯ ಆರ್ಥಿಕತೆ 2.54 ಡಾಲರ್ ಗುಣಕದಲ್ಲಿ ಪರಿಣಾಮವನ್ನು ಸೃಷ್ಟಿಸಿದೆ ಎಂದರು.
2023ರಲ್ಲಿ ಭಾರತದ ಬಾಹ್ಯಾಕಾಶ ವಲಯದ ಆದಾಯ 6.3 ಶತಕೋಟಿ ಡಾಲರ್ ಗೆ ಹೆಚ್ಚಿದ್ದು, ಇದು ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲೇ ಎಂಟನೇ ಸ್ಥಾನದಲ್ಲಿದೆ. ಇದು 47 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದು, ಇದರಲ್ಲಿ 96 ಸಾವಿರ ಸರ್ಕಾರಿ ಉದ್ಯೋಗಗಳು ಸೇರಿವೆ ಎಂದು ತಿಳಿಸಿದರು.
2024ಕ್ಕೆ ಇದ್ದಂತೆ ಭಾರತದ ಬಾಹ್ಯಾಕಾಶ ಆರ್ಥಿಕತೆಯ ಮೌಲ್ಯ ಸುಮಾರು 6700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಗೆ ಶೇಕಡ 2 ರಿಂದ 3ರಷ್ಟು ಕೊಡುಗೆ ನೀಡುತ್ತಿದೆ. ಇದು 2025ರ ವೇಳೆಗೆ 13 ಶತಕೋಟಿ ಡಾಲರ್ ಗೆ ಹೆಚ್ಚಲಿದ್ದು, ವಾರ್ಷಿಕ ಪ್ರಗತಿ ಶೇಕಡ 6ರಷ್ಟಾಗಲಿದೆ. ಮುಂದಿನ ದಶಕದಲ್ಲಿ ಭಾರತದ ಪಾಲನ್ನು ಶೇಕಡ 10ಕ್ಕೆ ಏರಿಸುವುದು ನಮ್ಮ ಗುರಿ ಎಂದು ಹೇಳಿದರು.