ಜೆಡಿಯುಗೆ ಮರಳಿದ ಬಿಹಾರದ ಮಾಜಿ ಸಚಿವ ಶ್ಯಾಮ್ ರಜಾಕ್

Update: 2024-09-01 14:54 GMT

ಶ್ಯಾಮ್ ರಜಾಕ್ | PC : Credit: X/@ShyamRajakBihar

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬದ್ಧ ವೈರಿ ಲಾಲೂ ಪ್ರಸಾದ್ ಯಾದವ್ ಅವರ ಆರ್ಜೆಡಿಯನ್ನು ತೊರೆದ ಎರಡು ವಾರಗಳ ನಂತರ, ಮಾಜಿ ಬಿಹಾರ ಸಚಿವ ಶ್ಯಾಮ್ ರಜಾಕ್ ಅವರು ರವಿವಾರ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರ್ಪಡೆಯಾಗಿದ್ದಾರೆ.

2020ರಲ್ಲಿ ರಾಜ್ಯ ಸಚಿವ ಸಂಪುಟ ಹಾಗೂ ಜೆಡಿಯು ಪಕ್ಷದಿಂದಲೇ ಉಚ್ಚಾಟನೆಗೊಳಗಾಗಿದ್ದ ಶ್ಯಾಮ್ ರಜಾಕ್ ಅವರನ್ನು ಜೆಡಿಯು ಪಕ್ಷದ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಹಲವಾರು ಉನ್ನತ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಝಾ, “ರಜಾಕ್ ಓರ್ವ ತಳ ಮಟ್ಟದ ಬೆಂಬಲ ಹೊಂದಿರುವ ನಾಯಕನಾಗಿದ್ದು, ಪಕ್ಷವನ್ನು ಬಲಪಡಿಸಲಿದ್ದಾರೆ. ವಿಶೇಷವಾಗಿ, ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಪ್ರತ್ಯೇಕ ಪ್ರವರ್ಗವಾಗಿ ಗುರುತಿಸಿರುವ ಮಹಾದಲಿತರಲ್ಲಿ” ಎಂದು ಶ್ಲಾಘಿಸಿದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ದಲಿತರಲ್ಲಿನ ಉಪ ವರ್ಗೀಕರಣ ಬಹು ಚರ್ಚಿತ ವಿಷಯವಾಗಿದೆ. ಆದರೆ, ನಮ್ಮ ನಾಯಕರು ದಿಟ್ಟ ಹೋರಾಟಗಾರರಾಗಿದ್ದಾರೆ. ನಮ್ಮ ಪಕ್ಷದಲ್ಲಿನ ರಜಾಕ್ ಅವರ ಉಪಸ್ಥಿತಿ ಎಲ್ಲ ಕಡೆಯೂ ಬಲವಾದ ಸಂದೇಶ ರವಾನಿಸಲಿದೆ ಎಂದು ಹೇಳಿದರು.

“ನಾನು ಕೊಂಚ ಉದ್ವೇಗದಿಂದ ಆರ್ಜೆಡಿ ಪಕ್ಷವನ್ನು ಸೇರ್ಪಡೆಯಾಗಿದ್ದೆ. ಆದರೆ, ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ಆಡಳಿತವೇ ಸಿದ್ಧಾಂತವಾಗಿರುವ ಆ ಪಕ್ಷದಲ್ಲಿ ನಾನು ಉಸಿರುಗಟ್ಟಿದ ಹಾಗೂ ಅಪಮಾನದ ವಾತಾವರಣವನ್ನು ಅನುಭವಿಸಿದೆ” ಎಂದು ರಜಾಕ್ ಹೇಳಿದರು.

ಆರ್ಜೆಡಿ ಪಕ್ಷವನ್ನು ತೊರೆದ ನಂತರ, ತಾನು ಆರು ಬಾರಿ ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರದಿಂದ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಸುಳಿವು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News