ಹೆದ್ದಾರಿ ಬದಿಯ ಹೊಂಡಕ್ಕೆ ಬಿದ್ದು ನಾಲ್ಕು ಮಕ್ಕಳು ಮೃತ್ಯು
ಲಕ್ನೋ: ಮಳೆ ನೀರು ತುಂಬಿದ್ದ ಕೊಚ್ಚೆಗುಂಡಿಗೆ ಬಿದ್ದ ನಾಲ್ಕು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕುರಾರಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಗಂಗಾ ಎಕ್ಸ್ಪ್ರೆಸ್ ಹೈವೇ ನಿರ್ಮಾಣ ಕಾಮಗಾರಿಗಾಗಿ ಮಾಡಿದ್ದ ಹೊಂಡದಲ್ಲಿ ಮಳೆ ನೀರು ತುಂಬಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತ ಮಕ್ಕಳ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಮಕ್ಕಳನ್ನು ಕುರಾರಿ ಗ್ರಾಮದ ಮುಸ್ತಕೀನ್ (9), ಖುಷ್ನುಮಾ (12) ಅಝ್ಮತ್ (11) ಮತ್ತು ಸದ್ದಾಂ (12) ಎಂದು ಗುರುತಿಸಲಾಗಿದ್ದು, ಮುಸ್ತಕೀನ್ ಮತ್ತು ಖುಷ್ನುಮಾ ಸಹೋದರ- ಸಹೋದರಿ ಎಂದು ಸ್ಥಳೀಯ ನಿವಾಸಿ ಸಗೀರ್ ಅಹ್ಮದ್ ಹೇಳಿದ್ದಾರೆ.
ಹೆದ್ದಾರಿ ನಿರ್ಮಾಣ ಕಂಪನಿ ಎರಡು ತಿಂಗಳ ಹಿಂದೆ ದೊಡ್ಡ ಹೊಂಡ ತೋಡಿದ್ದು, ಇದರಲ್ಲಿ ನೀರು ನಿಂತಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ. ಮಕ್ಕಳು ಅದರ ಪಕ್ಕ ಆಟವಾಡುತ್ತಿದ್ದಾಗ ಮುಸ್ತಕೀನ್ ಹೊಂಡಕ್ಕೆ ಬಿದ್ದು ಮುಳುಗಲಾರಂಭಿಸಿದ. ಇತರ ಮೂವರು ಮಕ್ಕಳು ಮುಳುತ್ತಿದ್ದವರನ್ನು ರಕ್ಷಿಸಲು ಒಬ್ಬರ ಮೇಲೊಬ್ಬರಂತೆ ಹೊಂಡಕ್ಕೆ ಹಾರಿದರು. ಹೀಗಾಗಿ ನಾಲ್ಕು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಶಹಾಬಾದ್ ಸರ್ಕಲ್ ಅಧಿಕಾರಿ ಹೇಮಂತ್ ಉಪಾಧ್ಯಾಯ ವಿವರಿಸಿದ್ದಾರೆ.