ಜಿ20 ಶೃಂಗಸಭೆ: ಸೆ.8ರಿಂದ 10ರವರೆಗೆ ದಿಲ್ಲಿಯಲ್ಲಿ ಶಾಲಾ ಕಾಲೇಜುಗಳು, ಕಚೇರಿಗಳಿಗೆ ರಜೆ
ಹೊಸದಿಲ್ಲಿ: ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಎಲ್ಲ ಶಾಲಾಕಾಲೇಜುಗಳು ಮತ್ತು ಕಚೇರಿಗಳಿಗೆ ಸೆ.8ರಿಂದ ಸೆ.10ರವರೆಗೆ ರಜೆಯನ್ನು ಘೋಷಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ದಿಲ್ಲಿ ಸಚಿವೆ ಅತಿಷಿ, ಭದ್ರತೆ ಮತ್ತು ಸಂಚಾರ ನಿರ್ಬಂಧಗಳ ಕಾರಣದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಪ್ರತಿನಿಧಿಗಳು ರಾಜಧಾನಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿರುವುದರಿಂದ ಈ ನಿರ್ಧಾರವು ಹೊಸದಿಲ್ಲಿ ಜಿಲ್ಲೆಗೆ ಮಾತ್ರವಲ್ಲ, ಇಡೀ ನಗರಕ್ಕೆ ಅನ್ವಯಿಸುತ್ತದೆ ಎಂದು ತಿಳಿಸಿದರು.
ನಿಯಂತ್ರಿತ ವಲಯ-1 ಎಂದು ಗುರುತಿಸಲಾಗಿರುವ ಹೊಸದಿಲ್ಲಿ ಜಿಲ್ಲೆಯು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೊಂದಿರುತ್ತದೆ.
ಕೆಲವು ದೇಶಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ತಂಗಲಿರುವ ಮೌರ್ಯ ಶೆರಟಾನ್, ಲೋಧಿ ಹೋಟೆಲ್ ಮತ್ತು ಹಯಾತ್ನಂತಹ ಹೋಟೇಲ್ಗಳ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರವು ತಾತ್ಕಾಲಿವಾಗಿ ವ್ಯತ್ಯಯಗೊಳ್ಳಬಹುದು.
ವಾಕಿಂಗ್ ಮತ್ತು ಸೈಕ್ಲಿಂಗ್ನಂತಹ ಚಟುವಟಿಕೆಗಳಿಗಾಗಿ ನಿಯಂತ್ರಿತ ವಲಯದ ವ್ಯಾಪ್ತಿಯಲ್ಲಿರುವ ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥಕ್ಕೆ ಭೇಟಿ ನೀಡದಂತೆ ನಿವಾಸಿಗಳನ್ನು ಪೋಲಿಸರು ಆಗ್ರಹಿಸಿದ್ದಾರೆ. ಶೃಂಗಸಭೆಯು ನಡೆಯಲಿರುವ, ಹೊಸದಾಗಿ ನಿರ್ಮಾಣಗೊಂಡಿರುವ ಪ್ರದರ್ಶನ ಕೇಂದ್ರ ‘ಭಾರತ ಮಂಡಪಂ’ ಸಮೀಪವಿರುವ ಸುಪ್ರೀಂ ಕೋರ್ಟ್ ನಿಲ್ದಾಣವು ಶುಕ್ರವಾರದಿಂದ ಎರಡು ದಿನಗಳ ಕಾಲ ಮುಚ್ಚಿರಲಿದ್ದು, ಇತರೆಲ್ಲ ನಿಲ್ದಾಣಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ದಿಲ್ಲಿ ಮೆಟ್ರೋ ರೈಲು ನಿಗಮವು ತಿಳಿಸಿದೆ.
ಆದಾಗ್ಯೂ ಭದ್ರತಾ ಏಜೆನ್ಸಿಗಳು ನಿರ್ದೇಶನ ನೀಡಿದಾಗ ವಿವಿಐಪಿ ಪ್ರತಿನಿಧಿಗಳ ಚಲನವಲನಕ್ಕೆ ಅನುಕೂಲವಾಗುವಂತೆ ಸೆ.9 ಮತ್ತು 10ರಂದು ಹೊಸದಿಲ್ಲಿ ಜಿಲ್ಲೆಯ ಕೆಲವು ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಅಲ್ಪಾವಧಿಗೆ ನಿಯಂತ್ರಿಸಬಹುದು ಎಂದು ಮೆಟ್ರೋ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶೃಂಗಸಭೆಯ ಸಮಯದಲ್ಲಿ ಹೊಸದಿಲ್ಲಿ ಪ್ರದೇಶದಲ್ಲಿಯ ಕ್ಲೌಡ್ ಕಿಚನ್ಗಳು ಮತ್ತು ಡೆಲಿವರಿ ಸೇವೆಗಳು ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ನಿಯಂತ್ರಿತ ವಲಯದಲ್ಲಿಯ ಎಲ್ಲ ಥಿಯೇಟರ್ಗಳು ಮತ್ತು ರೆಸ್ಟೋರಂಟ್ಗಳೂ ಮುಚ್ಚಿರುತ್ತವೆ.
ರಿಂಗ್ ರೋಡ್ ಅಥವಾ ಮಹಾತ್ಮಾ ಗಾಂಧಿ ಮಾರ್ಗದಿಂದ ಸುತ್ತುವರಿದಿರುವ ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಗುರುತಿಸಲಾಗಿದ್ದು, ಇಲ್ಲಿ ವಾಹನಗಳು ಸಂಚರಿಸಬಹುದು. ಈ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳು ಮತ್ತು ಔಷಧಿ ಅಂಗಡಿಗಳಂತಹ ಅಗತ್ಯ ಸೇವೆಗಳು ತೆರೆದಿರುತ್ತವೆ.
ಮಾಧ್ಯಮಗಳ ಮೇಲೂ ನಿರ್ಬಂಧಗಳನ್ನು ಹೇರಲಾಗಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೇರುವಂತೆ ಪತ್ರಕರ್ತರಿಗೆ ಸೂಚಿಸಲಾಗಿದ್ದು, ಅಲ್ಲಿಂದ ಅವರನ್ನು ಶೃಂಗಸಭೆಯ ಸ್ಥಳಕ್ಕೆ ಕರೆದೊಯ್ಯಲಾಗುವುದು. ಮಾಧ್ಯಮಗಳ ವಾಹನಗಳು ಹೊಸದಿಲ್ಲಿ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ.
ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ರಾಷ್ಟ್ರಗಳ ಮುಖ್ಯಸ್ಥರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಆಸ್ಟ್ರೆಲಿಯಾ ಪ್ರಧಾನಿ ಆ್ಯಂಥನಿ ಅಲ್ಬಾನೀಸ್, ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಝ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಮತ್ತು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಶಿಯೊ ಲುಲಾ ಡಾ ಸಿಲ್ವಾ ಅವರು ಸೇರಿದ್ದಾರೆ.
ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತನ್ನ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರನ್ನು ಶೃಂಗಸಭೆಗೆ ಕಳುಹಿಸಲಿದ್ದಾರೆ. ಚೀನಾವನ್ನು ಅಧ್ಯಕ್ಷ ಕ್ಸಿಜಿನ್ಪಿಂಗ್ ಬದಲು ಪ್ರಧಾನಿ ಲಿ ಕಿಯಾಂಗ್ ಅವರು ಪ್ರತಿನಿಧಿಸಲಿದ್ದಾರೆ.
ಜಿ 20 ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಝಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಶ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೊ, ರಶ್ಯಾ, ಸೌದಿ ಅರೇಬಿಯ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವನ್ನು ಒಳಗೊಂಡಿದೆ.
ಜಿ 20 ಗುಂಪಿನ ಸದಸ್ಯ ದೇಶಗಳು ಸಾಮೂಹಿಕವಾಗಿ ಒಟ್ಟು ಜಾಗತಿಕ ಉತ್ಪನ್ನ (ಜಿಡಬ್ಲುಪಿ)ದಲ್ಲಿ ಶೇ.80, ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಶೇ.75ರಷ್ಟು ಪಾಲನ್ನು ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಮತ್ತು ವಿಶ್ವದ ಭೂಪ್ರದೇಶದ ಶೇ.60ರಷ್ಟನ್ನು ಹೊಂದಿವೆ. ಈ ದೇಶಗಳು ಸರದಿಯ ಮೇಲೆ ಗುಂಪಿನ ಅಧ್ಯಕ್ಷತೆಯನ್ನು ವಹಿಸುತ್ತವೆ ಮತ್ತು ವಾರ್ಷಿಕ ಶೃಂಗಸಭೆಗಾಗಿ ಸೇರುತ್ತವೆ. 2023ರಲ್ಲಿ ಜಿ20 ಅಧ್ಯಕ್ಷತೆಯನ್ನು ಹೊಂದಿರುವ ಭಾರತವು ಎರಡು ದಿನಗಳ ಶೃಂಗಸಭೆಯ ಬಳಿಕ ಬ್ರೆಝಿಲ್ಗೆ ಅಧಿಕಾರವನ್ನು ಹಸ್ತಾಂತರಿಸಲಿದೆ.