ವ್ಯಭಿಚಾರವನ್ನು ಅಪರಾಧೀಕರಿಸಲು ಐಪಿಸಿಯ ಬದಲಿ ಮಸೂದೆಯಲ್ಲಿ ಲಿಂಗ-ತಟಸ್ಥ ನಿಬಂಧನೆ ಸೇರಿಸಲು ಸಂಸದೀಯ ಸಮಿತಿ ಶಿಫಾರಸು

Update: 2023-11-13 15:28 GMT

Photo : PTI 

ಹೊಸದಿಲ್ಲಿ: ಉದ್ದೇಶಿತ ಭಾರತೀಯ ನ್ಯಾಯ ಸಂಹಿತಾದಲ್ಲಿ ವ್ಯಭಿಚಾರವನ್ನು ಅಪರಾಧೀಕರಿಸುವ ನಿಬಂಧನೆಯನ್ನು ಮರುಸೇರ್ಪಡೆಗೊಳಿಸಬೇಕು ಮತ್ತು ಇದು ಲಿಂಗ-ತಟಸ್ಥ ರೀತಿಯಲ್ಲಿರಬೇಕು ಎಂದು ಗೃಹ ವ್ಯವಹಾರಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಬದಲು ಬರಲಿರುವ ಭಾರತೀಯ ನ್ಯಾಯ ಸಂಹಿತಾ ಮಸೂದೆಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇದರೊಂದಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಅಪರಾಧ ಪ್ರಕ್ರಿಯಾ ಸಂಹಿತೆಯ ಬದಲು) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಸಾಕ್ಷ್ಯ ಕಾಯ್ದೆಯ ಬದಲು) ಮಸೂದೆಗಳನ್ನು ಸಂಸದೀಯ ಸಮಿತಿಯ ಅವಗಾಹನೆಗೆ ಸಲ್ಲಿಸಿದ್ದರು.

ಸಮಿತಿಯು ನ.6ರಂದು ಈ ಮಸೂದೆಗಳನ್ನು ಅಂಗೀಕರಿಸಿದೆ. ಭಾರತೀಯ ನ್ಯಾಯ ಸಂಹಿತಾ ಕುರಿತು ತನ್ನ ವರದಿಯಲ್ಲಿ ಸಮಿತಿಯು,ಭಾರತೀಯ ಸಮಾಜದಲ್ಲಿ ವಿವಾಹ ವ್ಯವಸ್ಥೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಅದರ ಪಾವಿತ್ರ್ಯವನ್ನು ಕಾಪಾಡುವ ಅಗತ್ಯವಿದೆ ಎಂದು ಹೇಳಿದೆ.

ವಿವಾಹ ವ್ಯವಸ್ಥೆಯ ರಕ್ಷಣೆಗಾಗಿ ವ್ಯಭಿಚಾರವನ್ನು ಅಪರಾಧೀಕರಿಸುವ ಕಲಮ್ ಅನ್ನು ಲಿಂಗ-ತಟಸ್ಥವನ್ನಾಗಿಸುವ ಮೂಲಕ ಸಂಹಿತಾದಲ್ಲಿ ಉಳಿಸಿಕೊಳ್ಳಬೇಕು ಎಂದು ಸಮಿತಿಯು ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ವ್ಯಭಿಚಾರವನ್ನು ಅಪರಾಧವನ್ನಾಗಿಸಿದ್ದ ಭಾರತೀಯ ದಂಡ ಸಂಹಿತೆಯ ಕಲಂ 497ನ್ನು ರದ್ದುಗೊಳಿಸಿತ್ತು.

ಸಮಿತಿಯ ಇತರ ಶಿಫಾರಸುಗಳು:

ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ರದ್ದುಗೊಳಿಸಿದ್ದ ಐಪಿಸಿಯ ಕಲಂ 377ರಲ್ಲಿಯ ಪರಸ್ಪರ ಸಮ್ಮತಿಯ ಮೇರೆಗೆ ಸಲಿಂಗಕಾಮ ಚಟುವಟಿಕೆಯನ್ನು ಅಪರಾಧೀಕರಿಸಿದ್ದ ಭಾಗದ ಮರುಸೇರ್ಪಡೆಗೂ ಸಮಿತಿಯು ಶಿಫಾರಸು ಮಾಡಿದೆ. ಸದ್ರಿ ಕಲಂ ಅನೈಸರ್ಗಿಕ ಲೈಂಗಿಕತೆಯನ್ನು ಅಪರಾಧೀಕರಿಸಿದ್ದು ಅದಕ್ಕೆ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಬಹುದಿತ್ತು. ಪರಸ್ಪರ ಸಹಮತದ ವಯಸ್ಕರ ನಡುವಿನ ಇಂತಹ ಚಟುವಟಿಕೆಯನ್ನು ಅಪರಾಧೀಕರಿಸುವ ಕಾನೂನಿನ ನಿಬಂಧನೆಗಳು ಅಸಾಂವಿಧಾನಿಕವಾಗಿವೆ ಎಂದು ಕಲಂ ರದ್ದುಗೊಳಿಸಿದ್ದ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದರು. ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ವಿರುದ್ಧದ ನಿಬಂಧನೆಯು ಕಾನೂನಿನಲ್ಲಿ ಉಳಿದುಕೊಂಡಿತ್ತು.

ಪುರುಷ,ಮಹಿಳೆ ಮತ್ತು ತೃತೀಯ ಲಿಂಗಿಗಳ ವಿರುದ್ಧ ಸಮ್ಮತಿಯಿಲ್ಲದ ಲೈಂಗಿಕ ಅಪರಾಧಗಳು ಮತ್ತು ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ಕುರಿತು ಭಾರತೀಯ ನ್ಯಾಯ ಸಂಹಿತಾದಲ್ಲಿ ಯಾವುದೇ ನಿಬಂಧನೆಗಳಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News