ಗಡಿಪಾರಾದವರಲ್ಲಿ ಪಂಜಾಬ್ ನವರದ್ದೇ ದೊಡ್ಡ ಪಾಲು: ಕೇಂದ್ರ ಸರಕಾರ

Update: 2025-02-19 22:20 IST
ಗಡಿಪಾರಾದವರಲ್ಲಿ ಪಂಜಾಬ್ ನವರದ್ದೇ ದೊಡ್ಡ ಪಾಲು: ಕೇಂದ್ರ ಸರಕಾರ

PC: x.com/satnamkhalsa1

  • whatsapp icon

ಹೊಸದಿಲ್ಲಿ: ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತು ತರುತ್ತಿರುವ ಅಮೆರಿಕ ವಿಮಾನಗಳು ಅಮೃತಸರದಲ್ಲಿ ಬಂದಿಳಿಯುತ್ತಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಿಗೇ, ಅಕ್ರಮ ವಲಸಿಗರ ಪೈಕಿ ಪಂಜಾಬ್ ರಾಜ್ಯದ್ದೇ ದೊಡ್ಡ ಪಾಲಿದೆ ಎಂದು ಬುಧವಾರ ಕೇಂದ್ರ ಸರಕಾರದ ಮೂಲಗಳು ಈ ನಡೆಯನ್ನು ಸಮರ್ಥಿಸಿಕೊಂಡಿವೆ.

ಫೆಬ್ರವರಿ 5ರಿಂದ ಭಾರತಕ್ಕೆ ಆಗಮಿಸಿರುವ ಮೂರು ವಿಮಾನಗಳ ಅಂಕಿ-ಸಂಖ್ಯೆಯನ್ನು ಹಂಚಿಕೊಂಡಿರುವ ಕೇಂದ್ರ ಸರಕಾರದ ಮೂಲಗಳು, ಅಮೆರಿಕ ಸೇನಾ ವಿಮಾನದಲ್ಲಿ ಗಡಿಪಾರಿಗೊಳಗಾಗಿರುವ ಒಟ್ಟು 333 ಜನರ ಪೈಕಿ 126 ಮಂದಿ ಪಂಜಾಬ್ ಗೆ ಸೇರಿದ್ದು, ನಂತರದಲ್ಲಿ ಹರ್ಯಾಣದ 110 ಮಂದಿ ಹಾಗೂ ಗುಜರಾತ್ ನ 74 ಮಂದಿ ಇದ್ದಾರೆ ಎಂದು ಹೇಳಿವೆ.

ಉಳಿದಂತೆ ಉತ್ತರ ಪ್ರದೇಶದ ಎಂಟು ಮಂದಿ, ಮಹಾರಾಷ್ಟ್ರದ ಐವರು, ಹಿಮಾಚಲ ಪ್ರದೇಶ, ಚಂಡೀಗಢ, ರಾಜಸ್ಥಾನ ಮತ್ತು ಗೋವಾದ ತಲಾ ಇಬ್ಬರು ಹಾಗೂ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದ ತಲಾ ಒಬ್ಬರು ಸೇರಿದ್ದಾರೆ ಎಂದು ಮಾಹಿತಿ ನೀಡಿವೆ.

ಫೆಬ್ರವರಿ 5, 15 ಹಾಗೂ 16ರಂದು ಭಾರತಕ್ಕೆ ಬಂದಿಳಿದ ಮೂರು ವಿಮಾನಗಳು ತಲಾ 100ಕ್ಕೂ ಹೆಚ್ಚು ಭಾರತೀಯರನ್ನು ಕರೆ ತಂದಿದ್ದು, ಈವರೆಗೆ 333 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದೂ ಅವು ಹೇಳಿವೆ. ಗಡಿಪಾರಿಗೊಳಗಾಗಿರುವ ಪೈಕಿ 262 ಪುರುಷರು, 42 ಮಹಿಳೆಯರು ಹಾಗೂ 29 ಅಪ್ರಾಪ್ತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 2020ರಿಂದ ಇಲ್ಲಿಯವರೆಗೆ ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತ ಸುಮಾರು 23 ವಿಮಾನಗಳು ದೇಶಕ್ಕೆ ಆಗಮಿಸಿದ್ದು, ಅವೆಲ್ಲವೂ ಅಮೃತಸರದಲ್ಲೇ ಬಂದಿಳಿದಿವೆ ಎಂದು ಅವು ಹೇಳಿವೆ.

ತಮ್ಮ ಚುನಾವಣಾ ಪ್ರಚಾರದಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂದು ಭರವಸೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಇದುವರೆಗೆ ಗಡಿಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತ ಮೂರು ಸೇನಾ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.

ಗಡಿಪಾರಿಗೊಳಗಾಗಿರುವ ಭಾರತೀಯರಿಗೆ ಕೋಳ ತೊಡಿಸಿರುವುದೂ ಸೇರಿದಂತೆ, ಅವರನ್ನು ನಡೆಸಿಕೊಂಡಿರುವ ರೀತಿಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಈ ವಿಷಯವನ್ನು ಭಾರತ ಸರಕಾರ ಅಮೆರಿಕದೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News