ಸ್ವಂತ ಮನೆಗಳ ಖರೀದಿ ಅಥವಾ ನಿರ್ಮಾಣಕ್ಕೆ ಮಧ್ಯಮ ವರ್ಗದವರಿಗೆ ಯೋಜನೆ ತರಲಿರುವ ಕೇಂದ್ರ ಸರಕಾರ
ಹೊಸದಿಲ್ಲಿ: ಬಾಡಿಗೆ ಮನೆಗಳಲ್ಲದೆ ಕೊಳಗೇರಿಗಳು ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಜನರು ತಮ್ಮದೇ ಸ್ವಂತ ಮನೆಯನ್ನು ಖರೀದಿ ಅಥವಾ ನಿರ್ಮಿಸಿಕೊಳ್ಳಲು ಸರ್ಕಾರವು ವಸತಿ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ಗುರುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಮಧ್ಯಂತರ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ ಎಂದು livemint.com ವರದಿ ಮಾಡಿದೆ.
ಸರ್ಕಾರದ ದೊಡ್ಡ ಗುರಿಯಾದ ‘ಎಲ್ಲರಿಗೂ ಸೂರು’ ಎಂಬ ಆಶಯಕ್ಕನುಗುಣವಾಗಿ ಗುರುವಾರ ಈ ಪ್ರಕಟಣೆ ಹೊರ ಬಿದ್ದಿದ್ದು, ಈ ಯೋಜನೆಯು ಈಗಾಗಲೇ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಥವಾ ಗ್ರಾಮೀಣ ಯೋಜನೆಯನ್ನೂ ಒಳಗೊಂಡಿರಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಯೋಜನೆಯಡಿ ಈವರೆಗೆ 30 ದಶ ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 2 ಕೋಟಿ ಮನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ನಿರ್ಮಿಸಲಾಗುತ್ತದೆ. ಆ ಮೂಲಕ ಕುಟುಂಬದಲ್ಲಿನ ಸದಸ್ಯರ ಹೆಚ್ಚಿದ ಬೇಡಿಕೆಗನುಗುಣವಾಗಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಗರ ಹಾಗೂ ಕೈಗೆಟಕುವ ವಸತಿ ಕಡೆಗೆ ಹೆಚ್ಚು ಗಮನ ಹರಿಸಿರುವ ಬಜೆಟ್, ಅದಕ್ಕಾಗಿ 2023ರಲ್ಲಿ ನಿಗದಿಯಾಗಿದ್ದ ಮೊತ್ತಕ್ಕಿಂತ ಶೇ. 66ರಷ್ಟು ಮೊತ್ತವನ್ನು ಏರಿಕೆ ಮಾಡಿ, 2024ರ ಆರ್ಥಿಕ ವರ್ಷದಲ್ಲಿ ರೂ. 79,000 ಕೋಟಿ ಮೊತ್ತವನ್ನು ಮೀಸಲಿರಿಸಿದೆ.
‘ಎಲ್ಲರಿಗೂ ಸೂರು’ ಕನಸನ್ನು ಸಾಕಾರ ಮಾಡಲು ರೂ. 79,000 ಕೋಟಿಯ ಪೈಕಿ ರೂ. 25,103 ಕೋಟಿ ಮೊತ್ತವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರಕ್ಕೆ ಮೀಸಲಿಟ್ಟಿದ್ದರೆ, ಉಳಿದ ಮೊತ್ತವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣಕ್ಕೆ ಮೀಸಲಿಡಲಾಗಿದೆ.