ನಿರ್ಮಲಾ ಸೀತಾರಾಮನ್ ಕುರಿತ ಡೀಪ್‍ಫೇಕ್ ವಿಡಿಯೊ ವೈರಲ್: ಎಫ್‍ಐಆರ್ ದಾಖಲು
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ವಿಡಂಬನಾತ್ಮಕ ಡೀಪ್ ಫೇಕ್ ವೀಡಿಯೊ ಶೇರ್ ಮಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಗುಜರಾತ್ ಗೃಹಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ.
ಡೀಪ್‍ಫೇಕ್ ಎನ್ನುವುದು ಕೃತಕ ಬುದ್ಧಿಮತ್ತೆ (AI) ಸಾಫ್ಟ್ ವೇರ್ ಬಳಸಿಕೊಂಡು ವಿಡಿಯೊವನ್ನು ಮತ್ತು ವಿಡಿಯೊ ಅಂಶಗಳನ್ನು ವಿರೂಪಗೊಳಿಸುವ ಒಂದು ತಂತ್ರವಾಗಿದೆ. ಈ ಮೂಲಕ ಜನ ಎಂದೂ ಆಡದೇ ಇರುವ ಮಾತನ್ನು ನಾವು ಆಡಿದಂತೆ ಬಿಂಬಿಸಬಹುದಾಗಿದೆ. ಈ ವಿಡಿಯೊ ಅಂಶಗಳನ್ನು ವಾಸ್ತವ ಎನ್ನುವಂತೆ ಬಿಂಬಿಸಬಹುದಾಗಿದ್ದು, ಸಾಮಾನ್ಯವಾಗಿ ಕೆಟ್ಟ ಉದ್ದೇಶದಿಂದ ಇದನ್ನು ಬಳಸಲಾಗುತ್ತದೆ.
ಎಕ್ಸ್ ವೇದಿಕೆಯಲ್ಲಿ ಈ ವಿಡಿಯೊ ಪೋಸ್ಟ್ ಮಾಡಿದ ಆರೋಪದಲ್ಲಿ ಚಿರಾಗ್ ಪಟೇಲ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೊ ತಿರುಚಲಾಗಿದ್ದು, ಜಿಎಸ್‍ಟಿ ತೆರಿಗೆ ಸಂಗ್ರಹ ಬಗೆಗಿನ ಮಾಸಿಕ ಪತ್ರಿಕಾ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಸಲಿದೆ ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗಾರರ ಜತೆ ಮಾತನಾಡುತ್ತಿರುವಂತೆ ಬಿಂಬಿಸಲಾಗಿತ್ತು.