ದುಬೈನಿಂದ ಅಕ್ರಮವಾಗಿ ತಂದ 50 ಲಕ್ಷ ಮೌಲ್ಯದ ಚಿನ್ನ ದರೋಡೆ !
ಅಹ್ಮದಾಬಾದ್: ದುಬೈನಿಂದ ಕಳ್ಳಸಾಗಾಣಿಕೆ ಮೂಲಕ ದೇಶಕ್ಕೆ ತಂದ 50 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಕ್ಯಾಪ್ಸೂಲ್‍ಗಳನ್ನು ತಂದ ವ್ಯಕ್ತಿಯನ್ನು ಭಯೋತ್ಪಾದಕ ನಿಗ್ರಹ ಪಡೆಯ ಅಧಿಕಾರಿ ಎಂದು ಬಿಂಬಿಸಿಕೊಂಡ ಇಬ್ಬರು ಅಪಹರಿಸಿ ಚಿನ್ನದ ಕ್ಯಾಪ್ಸೂಲ್ ದರೋಡೆ ಮಾಡಿದ ಘಟನೆ ಶನಿವಾರ ನಡೆದಿದೆ.
ಈ ಬಗ್ಗೆ ದೂರು ನೀಡಿರುವ ಡ್ಯಾನಿಷ್ ಶೇಖ್ ಎಂಬ ವ್ಯಕ್ತಿ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆತ ವಡೋದರದ ಪರಿಚಿತ ವ್ಯಕ್ತಿಗೆ ದುಬೈನಿಂದ ಚಿನ್ನವನ್ನು ಅಕ್ರಮವಾಗಿ ತರುವ ಸಲುವಾಗಿ ಅಕ್ಟೋಬರ್ 9ಕ್ಕೆ ದುಬೈಗೆ ತೆರಳಿದ್ದ. ಈ ಕಾರ್ಯವನ್ನು ಡ್ಯಾನಿಷ್‍ಗೆ ವಹಿಸಿದ್ದ ವ್ಯಕ್ತಿ ದುಬೈ ಪ್ರಯಾಣದ ಟಿಕೆಟ್, ವಾಸ್ತವ್ಯವನ್ನು ವ್ಯವಸ್ಥೆ ಮಾಡಿದ್ದಲ್ಲದೇ, ಚಿನ್ನವನ್ನು ಕಳ್ಳಸಾಗಾಣಿಕೆ ಮೂಲಕ ತರಲು 20 ಸಾವಿರ ರೂಪಾಯಿ ನೀಡಿದ್ದ.
ಶೇಖ್ ಎರಡು ಚಿನ್ನದ ಕ್ಯಾಪ್ಸೂಲ್‍ಗಳನ್ನು ಗುದದ್ವಾರದಲ್ಲಿ ಇರಿಸಿಕೊಂಡು ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 28ರಂದು ಮುಂಜಾನೆ ಇಳಿದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಮಿಗ್ರೇಶನ್ ವಿಧಿವಿಧಾನಗಳನ್ನು ಪೂರೈಸಿದ ನಂತರ ಶೇಖ್ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗಕ್ಕೆ ನಡೆದುಕೊಂಡು ಹೋಗುತ್ತಿದ್ದ. ಶೇಖ್‍ಗೆ ಈ ಕೆಲಸ ವಹಿಸಿದ್ದ ವ್ಯಕ್ತಿ ಕಳುಹಿಸಿದ ವ್ಯಾನ್‍ನಲ್ಲಿ ಆತ ವಡೋದರಕ್ಕೆ ತೆರಳಬೇಕಿತ್ತು. ವ್ಯಾನ್ ಬಳಿಗೆ ಬಂದು ವ್ಯಾನ್ ಹತ್ತಬೇಕು ಎನ್ನುವಷ್ಟರಲ್ಲಿ ಎಟಿಎಸ್ ಅಧಿಕಾರಿ ಎಂದು ಹೇಳಿಕೊಂಡ ಇಬ್ಬರು ಈತನನ್ನು ವಶಕ್ಕೆ ಪಡೆದರು. ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿರುವ ವಿಷಯ ನಮಗೆ ತಿಳಿದಿದೆ. ಆದ್ದರಿಂದ ಎಟಿಎಸ್ ಕಚೇರಿಗೆ ಬರಬೇಕು ಎಂದು ಒತ್ತಾಯಿಸಿದರು ಎಂದು ಹೇಳಲಾಗಿದೆ.
ವ್ಯಾನನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಈತನನ್ನು ಇಳಿಸಿಕೊಂಡು ಬೇರೆ ಕಾರಿಗೆ ವರ್ಗಾಯಿಸಿದರು. ವ್ಯಾನ್ ಹಾಗೂ ವ್ಯಾನ್‍ನಲ್ಲಿದ್ದ ಇತರರನ್ನು ಬಿಟ್ಟುಬಿಟ್ಟರು. ಕಾರನ್ನು ದೊಡ್ಡ ವಸತಿ ಸಮುಚ್ಛಯದ 10ನೇ ಮಹಡಿಗೆ ಚಲಾಯಿಸಿ ಆತನನ್ನು ಥಳಿಸಿ ಚಿನ್ನದ ಕ್ಯಾಪ್ಸೂಲ್‍ಗಳನ್ನು ಕಿತ್ತುಕೊಂಡರು ಎಂದು ದೂರು ನೀಡಲಾಗಿದೆ. 850 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸೂಲ್‍ಗಳನ್ನು ಅಪಹರಿಸಲಾಗಿದ್ದು, ಇದರ ಮೌಲ್ಯ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.