ಗುಜರಾತ್: ಎರಡು ವರ್ಷಗಳಲ್ಲಿ 2.38 ಲಕ್ಷ ವಿದ್ಯಾವಂತ ನಿರುದ್ಯೋಗಿಗಳಲ್ಲಿ ಕೇವಲ 32 ಮಂದಿಗೆ ಉದ್ಯೋಗ ಭಾಗ್ಯ!
ಅಹ್ಮದಾಬಾದ್: ಸರಕಾರಿ ದತ್ತಾಂಶಗಳಂತೆ ಗುಜರಾತಿನಲ್ಲಿ ಒಟ್ಟು 2.38 ಲಕ್ಷ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ ಮತ್ತು ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ತಮ್ಮನ್ನು ನೊಂದಾಯಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಹ್ಮದಾಬಾದ್ ನಲ್ಲಿ 22, ಭಾವನಗರದಲ್ಲಿ 9 ಮತ್ತು ಗಾಂಧಿನಗರದಲ್ಲಿ ಓರ್ವ ಸೇರಿದಂತೆ ಈ ಪೈಕಿ ಕೇವಲ 32 ಯುವಜನರು ಸರಕಾರಿ ಉದ್ಯೋಗದ ಭಾಗ್ಯವನ್ನು ಪಡೆದಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ರಾಜ್ಯ ಸರಕಾರವು,ಕಳೆದ ಎರಡು ವರ್ಷಗಳಲ್ಲಿ ಒಟ್ಟು 29 ಜಿಲ್ಲೆಗಳಲ್ಲಿ 2,38,978 ವಿದ್ಯಾವಂತ ನಿರುದ್ಯೋಗಿಗಳು ಮತ್ತು 10,757 ಭಾಗಶಃ ವಿದ್ಯಾವಂತರು ನೊಂದಾಯಿಸಿಕೊಂಡಿದ್ದು,ರಾಜ್ಯದಲ್ಲಿನ ವಿದ್ಯಾವಂತ ನಿರುದ್ಯೋಗಿಗಳ ಒಟ್ಟು ಸಂಖ್ಯೆ 2,49,735ಕ್ಕೇರಿದೆ ಎಂದು ತಿಳಿಸಿದೆ.
ಅಂಕಿಅಂಶಗಳ ಪ್ರಕಾರ ಆನಂದ ಜಿಲ್ಲೆಯಲ್ಲಿ ಗರಿಷ್ಠ (21,633) ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಕನಿಷ್ಠ (2,362) ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ.