123 ವರ್ಷಗಳಲ್ಲೇ ನವೆಂಬರ್‌ನಲ್ಲಿ ದ್ವಿತೀಯ ಗರಿಷ್ಠ ತಾಪಮಾನ ದಾಖಲಿಸಿದ ಭಾರತ

Update: 2024-12-03 20:37 IST
Photo of  Temperature

ಸಾಂದರ್ಭಿಕ ಚಿತ್ರ | PTI 

  • whatsapp icon

ಹೊಸದಿಲ್ಲಿ : ಕಳೆದ 123 ವರ್ಷಗಳಲ್ಲೇ ಈ ಸಲದ ನವೆಂಬರ್ ತಿಂಗಳಲ್ಲಿ ಭಾರತವು ಎರಡನೇ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ನವೆಂಬರ್ ತಿಂಗಳಲ್ಲಿ ದೈನಂದಿನ ಗರಿಷ್ಠ ತಾಪಮಾನವು 29.37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಸಲದ ನವೆಂಬರ್‌ನಲ್ಲಿ ಭಾರತದಲ್ಲಿ ದಾಖಲಾದ ಸರಾಸರಿ ದೈನಂದಿನ ತಾಪಮಾನವು, ವಾಡಿಕೆಯ 0.62 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಾಗಿತ್ತು. ಸರಾಸರಿ ದೈನಂದಿನ ಗರಿಷ್ಠ ತಾಪಮಾನ ಕೂಡಾ ವಾಡಿಕೆಯ 1.05 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿತ್ತು.

ಅಕ್ಟೋಬರ್ ತಿಂಗಳಲ್ಲಿ ಮುಂಗಾರು ಋತು ಮುಕ್ತಾಯಗೊಂಡಿದ್ದು, ನವೆಂಬರ್ ತಿಂಗಳು ಸಾಮಾನ್ಯಕ್ಕಿಂತ ಅಧಿಕ ತಾಪಮಾನಕ್ಕೆ ಸಾಕ್ಷಿಯಾಯಿತು. ಒಂದು ವೇಳೆ ಇದೇ ಪ್ರವೃತ್ತಿ ಮುಂದುವರಿದಲ್ಲಿ, 2024ನೇ ಇಸವಿಯು ಜಾಗತಿಕವಾಗಿಯೂ ಅತ್ಯಧಿಕ ತಾಪಮಾನದ ವರ್ಷವಾಗಿ ಪರಿಣಮಿಸಲಿದೆ.

ಬಲವಾದ ಪಶ್ಚಿಮಮಾರುತಗಳು ದುರ್ಬಲಗೊಂಡಿರುವುದೇ ಭಾರತದಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಲು ಕಾರಣವೆಂದು ಹವಾಮಾನ ತಜ್ಞರು ವರದಿ ಮಾಡಿದ್ದಾರೆ.

ಪಶ್ಚಿಮ ಮಾರುತವು ಮೆಡಿಟರೇನಿಯನ್ ಸಮುದ್ರದಲ್ಲಿ ಉಗಮಗೊಂಡು, ನವೆಂಬರ್ ಹಾಗೂ ಮಾರ್ಚ್ ತಿಂಗಳ ನಡುವೆ ಭಾರತಕ್ಕೆ ಪ್ರಯಾಣಿಸುತ್ತದೆ. ಆದರೆ ಈ ಸಲ ಪಶ್ಚಿಮ ಮಾರುತಗಳು ದುರ್ಬಲಗೊಂಡಿದ್ದರಿಂದ ನವೆಂಬರ್‌ನಲ್ಲಿ ಸುರಿಯುವ ಮಳೆಯ ಪ್ರಮಾಣದಲ್ಲಿ 79.9 ಶೇಕಡ ಕೊರತೆ ಕಂಡುಬಂದಿದೆ ಈಶಾನ್ಯ ಮುಂಗಾರಿನಿಂದ ಪಡೆಯುವ ದಕ್ಷಿಣ ಪ್ರಸ್ಥಭೂಮಿಯ ಕೆಲವು ಪ್ರದೇಶಗಳಲ್ಲಿಯೂ ಶೇ.37.9ರಷ್ಟು ಮಳೆ ಕೊರತೆಯುಂಟಾಗಿದೆ.

ಎರಡು ದಶಕಗಳ ಹಿಂದೆಯೂ ಭಾರತವು ನವೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿತ್ತೆಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News