ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ | ಪಶ್ಚಿಮಬಂಗಾಳ ರಾಜ್ಯಪಾಲ, ಸಿಎಂಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ರ

Update: 2024-08-18 17:49 GMT

ಹರ್ಭಜನ್ ಸಿಂಗ್ (PTI)

ವಯನಾಡ್ : ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ತ್ವರಿತ ಹಾಗೂ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸುವಂತೆ ಆಗ್ರಹಿಸಿ ಮಾಜಿ ಕ್ರಿಕೆಟಿಗ ಹಾಗೂ ಆಪ್‌ನ ರಾಜ್ಯ ಸಭಾ ಸದಸ್ಯ ಹರ್ಭಜನ್ ಸಿಂಗ್ ಪಶ್ಚಿಮಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

‘‘ಕೋಲ್ಕತ್ತಾದಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾದ ವೈದ್ಯೆಗೆ ನ್ಯಾಯ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ದುಃಖವಾಗುತ್ತಿದೆ. ಈ ಘಟನೆ ನಮ್ಮೆಲ್ಲರ ಅಂತಃಕರಣವನ್ನು ಕಲಕಿದೆ. ನಾನು ಈ ಪ್ರಕರಣದ ಕುರಿತು ತ್ವರಿತ ಹಾಗೂ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸುವಂತೆ ಆಗ್ರಹಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನದಾಳದ ಮನವಿ ಸಲ್ಲಿಸಿದ್ದೇನೆ’’ ಎಂದು ಸಿಂಗ್ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಮಹಿಳೆಯರ ಸುರಕ್ಷೆ ಹಾಗೂ ಘನತೆ ಕುರಿತಂತೆ ಯಾವುದೇ ರಾಜಿ ಇಲ್ಲ ಎಂದು ಹೇಳಿದ ಅವರು, ಈ ಹೇಯ ಕೃತ್ಯ ಎಸಗಿದ ಆರೋಪಿಗಳು ಕಾನೂನನ್ನು ಎದುರಿಸಬೇಕು. ಅವರಿಗೆ ನೀಡುವ ಶಿಕ್ಷೆ ಮಾದರಿಯಾಗಿರಬೇಕು ಎಂದು ಸಿಂಗ್ ಹೇಳಿದ್ದಾರೆ.

‘‘ಆಗ ಮಾತ್ರ ನಾವು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇರಿಸಬಹುದು. ಇಂತಹ ದುರಂತ ಮತ್ತೆ ಎಂದಿಗೂ ಸಂಭವಿಸದು ಎಂದು ಖಾತರಿ ನೀಡಬಹುದು. ಪ್ರತಿ ಮಹಿಳೆ ಸುರಕ್ಷಿತವಾಗಿರುವ ಸಮಾಜವನ್ನು ರೂಪಿಸಬಹುದು. ಈಗ ಸಾಧ್ಯವಿಲ್ಲದೇ ಇದ್ದರೆ, ಇನ್ನು ಯಾವಾಗ? ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಈಗ ಕಾಲ ಕೂಡಿ ಬಂದಿದೆ ಎಂಬುದು ನನ್ನ ಭಾವನೆ’’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.

‘‘ನಾನು ಸಂತ್ರಸ್ತೆಗೆ ನ್ಯಾಯ ನೀಡುವಂತೆ, ಸುರಕ್ಷಿತ ಸಮಾಜಕ್ಕೆ, ಸಕಾರಾತ್ಮಕ ಬದಲಾವಣೆಗೆ ಆಗ್ರಹಿಸುತ್ತೇನೆ. ಅಲ್ಲದೆ, ನ್ಯಾಯಕ್ಕಾಗಿ ಹೋರಾಡುವ ವೈದ್ಯರಿಗೆ ಬೆಂಬಲವಾಗಿ ನಿಲ್ಲುತ್ತೇನೆ’’ ಎಂದು ಹರ್ಭಜನ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News