ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಗೆ ಯಾರ್ಕ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

Update: 2024-07-31 11:10 GMT

Photo credit: york.ac.uk

ಟೊರೊಂಟೊ: ಭಾರತದಲ್ಲಿನ ಕಾನೂನು ಮತ್ತು ನ್ಯಾಯಾಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಖ್ಯಾತ ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಐಎಎಸ್ ಅಧಿಕಾರಿ ಹರ್ಷ ಮಂದರ್ ಅವರಿಗೆ ಯಾರ್ಕ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.

ಹರ್ಷ ಮಂದರ್ ಗಣ್ಯ ಭಾರತೀಯ ಲೇಖಕ, ಅಂಕಣಕಾರ, ಸಂಶೋಧಕ, ಉಪನ್ಯಾಸಕ ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಕೋಮುವಾದ ಹಾಗೂ ಧಾರ್ಮಿಕ ಪ್ರಚೋದಿತ ಹಿಂಸಾಚಾರದ ಸಂತ್ರಸ್ತರ ಪರ ಒಗ್ಗಟ್ಟು ಪ್ರದರ್ಶಿಸಲು ತಾವು ಪ್ರಾರಂಭಿಸಿದ್ದ ಕಾರವಾನ್-ಎ-ಮೊಹಬ್ಬತ್ ಅಭಿಯಾನದಿಂದ ಹರ್ಷ ಮಂದರ್ ಪ್ರಖ್ಯಾತರಾಗಿದ್ದಾರೆ. ಹೊಸದಿಲ್ಲಿಯಲ್ಲಿನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ನ ನಿರ್ದೇಶಕರಾಗಿರುವ ಅವರು, ಸಾಮಾಜಿಕ ಸಮಾನತೆಯನ್ನು ಪ್ರಚುರ ಪಡಿಸಲು ಮೀಸಲಾಗಿರುವ ಸಂಶೋಧನಾ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಿದ್ದಾರೆ.

ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಹರ್ಷ ಮಂದರ್, ಸುಮಾರು ಎರಡು ದಶಕಗಳ ಕಾಲ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ್ ನ ಆದಿವಾಸಿ ಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, 2002ರಲ್ಲಿ ಗುಜರಾತ್ ಗಲಭೆ ನಡೆದ ಬೆನ್ನಿಗೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಅವರು, ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಹಾರ ಹಕ್ಕು ಅಭಿಯಾನದ ಪ್ರಮುಖ ವಕೀಲರಾಗಿರುವ ಅವರು, ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಷ ಮಂದರ್ ಅವರು ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿದ್ದರು ಹಾಗೂ ಜನರ ಮಾಹಿತಿ ಹಕ್ಕು ಕಾಯ್ದೆಯ ರಾಷ್ಟ್ರೀಯ ಅಭಿಯಾನದ ಸಂಸ್ಥಾಪಕ ಸದಸ್ಯರಾಗಿದ್ದರು.

ತಮಗೆ ಗೌರವ ಡಾಕ್ಟರೇಟ್ ದೊರೆತಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಹರ್ಷ ಮಂದರ್, “ಪ್ರಗತಿಪರ ಕಲಿಕೆಯ ತಾಣವಾದ ಯಾರ್ಕ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವುದರಿಂದ ಧನ್ಯನಾಗಿದ್ದೇನೆ. ಒಂದಲ್ಲ ಒಂದು ದಿನ ನನ್ನ ಜೀವನ ಮತ್ತು ಕೆಲಸ ಗೌರವಕ್ಕೆ ಅರ್ಹವಾಗಲಿದೆ ಎಂದು ಭಾವಿಸಿದ್ದೇನೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News