ದ್ವೇಷ ಭಾಷಣ ಆರೋಪ: ಮುಫ್ತಿ ಸಲ್ಮಾನ್ ಅಝ್ಹರಿ ಬಂಧನ

Update: 2024-02-05 03:53 GMT

Photo: fb.com/MuftiSalmanAzhari

ಅಹ್ಮದಾಬಾದ್: ಕೆಲ ದಿನಗಳ ಹಿಂದೆ ಗುಜರಾತ್ ನ ಜುನಾಗಢದಲ್ಲಿ ದ್ವೇಷಭಾಷಣ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ರವಿವಾರ ಮುಂಬೈ ಮೂಲದ ಇಸ್ಲಾಮಿಕ್ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಅಝ್ಹರಿ ಮತ್ತು ಇತರ ಇಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅಝ್ಹರಿ ಅವರನ್ನು ಮುಂಬೈನ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಠಾಣೆಯ ಹೊರಗೆ ಅಝ್ಹರಿ ಅವರ ನೂರಾರು ಮಂದಿ ಬೆಂಬಲಿಗರು ಜಮಾಯಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ.

ಜುನಾಗಢ ಬಿ. ಡಿವಿಷನ್ ಠಾಣೆಯ ಬಳಿ ಅಝ್ಹರಿ ಅವರು ಜನವರಿ 31ರಂದು ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಈ ಭಾಷಣದ ವಿಡಿಯೊ ವೈರಲ್ ಆದ ಬಬಳಿಕ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸ್ಥಳೀಯ ಸಂಘಟಕ ಮುಹಮ್ಮದ್ ಯೂಸುಫ್ ಮಲೀಕ್ ಮತ್ತು ಅಝೀಮ್ ಹಬೀಬ್ ವಡೇದರ ವಿರುದ್ಧವೂ ಐಪಿಸಿ ಸೆಕ್ಷನ್ 153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ತಮ್ಮ ಎಕ್ಸ್ ಹ್ಯಾಂಡಲ್ ನಿಂದ ಸರಣಿ ಪೋಸ್ಟ್ ಗಳನ್ನು ಮಾಡಿರುವ ಅಝ್ಹರಿ ಅವರು, 11.56ಕ್ಕೆ ತಮ್ಮನ್ನು ಗುಜರಾತ್ ಎಟಿಎಸ್, ಮುಂಬೈ ಎಟಿಸ್ ಹಾಗೂ ಚಿರಾಗ್ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ವಾಸದ ಕಟ್ಟಡವನ್ನು ಸುಮಾರು 25-30 ಪೊಲೀಸರು ಸುತ್ತುವರಿದಿದ್ದಾರೆ ಹಾಗೂ ಮನೆಯಿಂದ ತಮ್ಮನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದರು.

ಅಝ್ಹರಿ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಅವರ ವಕೀಲರು ಎಎನ್ಐ ಜತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News