ದಿಲ್ಲಿಯಲ್ಲಿ ಭಾರೀ ಧೂಳು, ಬಿರುಗಾಳಿ: ಹಲವಾರು ಮರಗಳು ಧರಾಶಾಯಿ, ಅನೇಕ ಮನೆಗಳಿಗೆ ಹಾನಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹಾಗೂ ದಿಲ್ಲಿಯಲ್ಲಿ ಶುಕ್ರವಾರ ಸಂಜೆ ಭಾರೀ ಧೂಳಿನಿಂದ ಕೂಡಿದ ಬಿರುಗಾಳಿ ಬೀಸಿದ್ದು, ಸಂಭವಿಸಿದ ದುರಂತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇತರ 23 ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯಿಂದಾಗಿ ಹಲವಾರು ಮರಗಳು ಧರಾಶಾಯಿಯಾಗಿವೆ ಹಾಗೂ ಆನೇಕ ಮನೆಗಳಿಗೆ ಹಾನಿಯಾಗಿವೆ.
ಗುಡುಗು ಹಾಗೂ ಬಿರುಗಾಳಿಯಿಂದಾಗಿ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ರಾಜಧಾನಿಗೆ ಆಗಮಿಸುತ್ತಿದ್ದ ಹಲವಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ದಿಲ್ಲಿಗೆ ಆಗಮಿಸುತ್ತಿದ್ದ 9 ವಿಮಾನಗಳನ್ನು ಜೈಪುರದೆಡೆಗೆ ತಿರುಗಿಸಲಾಯಿತು. ಧೂಳು, ಬಿರುಗಾಳಿಯಿಂದಾಗಿ ದೃಗ್ಗೋಚರತೆ ತೀರಾ ಕಡಿಮೆಯಿದ್ದುದರಿಂದ ಹಾಗೂ ಮರಗಳು ಉರುಳಿದ್ದರಿಂದ ಹಲವು ಪ್ರದೇಶಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ನೊಯ್ಡಾದ ಸೆಕ್ಟರ್ 58ರಲ್ಲಿ ಕಟ್ಟಡದ ದುರಸ್ತಿಗಾಗಿ ಸ್ಥಾಪಿಸಲಾಗಿದ್ದ ಅಟ್ಚಳಿಗೆಯೊಂದು ಬಿದ್ದುದರಿಂದ ಹಲವಾರು ವಾಹನಗಳಿಗೆ ಹಾನಿಯಾಗಿವೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.