ಕೇರಳದಲ್ಲಿ ಭಾರೀ ಮಳೆ | ನಾಲ್ವರ ಸಾವು, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Update: 2024-05-23 17:33 GMT

PC ; PTI 

ತಿರುವನಂತಪುರ : ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಗುರುವಾರ ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಿದೆ.

ಎರ್ನಾಕುಲಂ,ಇಡುಕ್ಕಿ,ತ್ರಿಶೂರು,ಪಾಲಕ್ಕಾಡ್,ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಎಚ್ಚರಿಕೆಯನ್ನು ಘೋಷಿಸಲಾಗಿದೆ. ತಿರುವನಂತಪುರ,ಕೊಲ್ಲಂ,ಅಲಪ್ಪುಳ,ಪಟ್ಟಣಂತಿಟ್ಟ, ಕೊಟ್ಟಾಯಂ,ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ಉಳಿದ ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹೊರಡಿಸಲಾಗಿದೆ.

ಬುಧವಾರ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದ್ದು, ಎರ್ನಾಕುಲಂ ಮತ್ತು ತ್ರಿಶೂರು ಜಿಲ್ಲೆಗಳಲ್ಲಿ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಕೊಚ್ಚಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವೆಡೆ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಹಲವಾರು ವಾಹನಗಳಿಗೆ ಹಾನಿಯುಂಟಾಗಿದೆ.

ತ್ರಿಶೂರಿನಲ್ಲಿ ಗುರುವಾಯೂರು ದೇವಸ್ಥಾನದ ಆವರಣ ಜಲಾವೃತಗೊಂಡಿದೆ. ನಗರದ ಅಶ್ವಿನಿ ಆಸ್ಪತ್ರೆಯೊಳಗೆ ಚರಂಡಿ ನೀರು ನುಗ್ಗಿದ್ದು, ಔಷಧಿಗಳು ಹಾಳಾಗಿವೆ ಮತ್ತು ರೆಫ್ರಿಜರೇಟರ್ಗೆ ಹಾನಿಯಾಗಿದೆ. ಮೊಣಕಾಲು ಮಟ್ಟದಲ್ಲಿ ನೀರು ನಿಂತಿದ್ದರಿಂದ ತುರ್ತು ಚಿಕಿತ್ಸಾ ಘಟಕವನ್ನು ಮೇಲ್ಗಡೆ ಸ್ಥಳಾಂತರಿಸಲಾಗಿದೆ. ಅತ್ತ ಕೋಝಿಕ್ಕೋಡ್ನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿನ ತಾಯಿ ಮತ್ತು ಮಗು ಆರೋಗ್ಯ ಸಂಸ್ಥೆಯ ವಾರ್ಡ್ ಗೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೀರು ನುಗ್ಗಿದೆ.

ಇಡುಕ್ಕಿಯಲ್ಲಿ ಮಲಂಕರ ಅಣೆಕಟ್ಟಿನ ನಾಲ್ಕು ದ್ವಾರಗಳನ್ನು ತೆರೆಯಲಾಗಿದೆ. ತೊಡುಪುಳ ಮತ್ತು ಮೂವಾಟ್ಟುಪುಳ ನದಿಗಳ ದಂಡೆಗಳಲ್ಲಿಯ ನಿವಾಸಿಗಳಿಗೆ ಎಚ್ಚರಿಕೆಯನ್ನು ಹೊರಡಿಸಲಾಗಿದೆ.

ಕೋಝಿಕ್ಕೋಡ್ನ ರಮನಟ್ಟುಕುರದಲ್ಲಿ ಭೂಕುಸಿತ ವರದಿಯಾಗಿದ್ದು, ಪಂಥೀರನಕಾವು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಹಾನಿಗೀಡಾಗಿದೆ.

ನೆರೆಯ ತಮಿಳುನಾಡಿನಲ್ಲಿ ಭೂಕುಸಿತಗಳಿಂದಾಗಿ ಮೆಟ್ಟುಪಾಳ್ಯಂ-ಊಟಿ ಮಾರ್ಗದಲ್ಲಿ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರಿಯಬಹುದು ಮತ್ತು ಮಧ್ಯ ಹಾಗೂ ಉತ್ತರ ಕೇರಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News