ತೆಲಂಗಾಣದಲ್ಲಿ ಭಾರೀ ಮಳೆ: ಮೃತರ ಸಂಖ್ಯೆ 16ಕ್ಕೇರಿಕೆ
ಹೈದರಾಬಾದ್: ಶುಕ್ರವಾರ ಇನ್ನೂ ಎಂಟು ಜನರ ಸಾವುಗಳು ವರದಿಯಾಗಿದ್ದು, ಇದರೊಂದಿಗೆ ತೆಲಂಗಾಣದಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ.
ಮುಲುಗು ಜಿಲ್ಲೆಯಲ್ಲಿ ಸುರಕ್ಷಿತ ಸ್ಥಳವನ್ನು ಅರಸಿಕೊಂಡು ಸಾಗುತ್ತಿದ್ದ 12 ಜನರ ಗುಂಪು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ನಾಲ್ವರು ಪ್ರಾಣ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದು,ಇತರ ಎಂಟು ಮಂದಿಯ ಮೃತದೇಹ ಶುಕ್ರವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು. ತೆಲಂಗಾಣದಲ್ಲಿ ಜು.24ರಿಂದ ಭಾರೀ ಮಳೆಯಾಗುತ್ತಿದ್ದು,ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜಲಮೂಲಗಳು ತುಂಬಿ ಹರಿಯುತ್ತಿವೆ.
ಹವಾಮಾನ ಇಲಾಖೆಯು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಜು.25ರಿಂದ 27ರವರೆಗೆ ರೆಡ್ ಅಲರ್ಟ್ ಹೊರಡಿಸಿತ್ತು. ಶುಕ್ರವಾರ ಇದನ್ನು ಆರೇಂಜ್ ಅಲರ್ಟ್ಗೆ ತಗ್ಗಿಸಲಾಗಿದೆ.
ಸರಕಾರವು ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.
ರಾಜ್ಯದ 108 ಗ್ರಾಮಗಳ 10,696 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎ.ಶಾಂತಿ ಕುಮಾರಿ ತಿಳಿಸಿದ್ದಾರೆ.