“ಸಂತ್ರಸ್ತೆಯನ್ನು ಅಪರಾಧಿಯನ್ನಾಗಿಸಬೇಡಿ”: ಮಹುವಾಗೆ ನ್ಯಾಯ ಆಗ್ರಹಿಸಿ ಬಿಎಸ್‌ಪಿ ಸಂಸದ ದಾನಿಶ್‌ ಅಲಿ ಏಕಾಂಗಿ ಪ್ರತಿಭಟನೆ

Update: 2023-12-08 12:01 GMT
Photo: ANI

ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಇಂದು ಲೋಕಸಭೆಯಿಂದ ಉಚ್ಚಾಟನೆಗೊಳಿಸಿದ ಬೆನ್ನಲ್ಲೇ ಬಹುಜನ ಸಮಾಜ ಪಕ್ಷದ ಸಂಸದ ದಾನಿಶ್‌ ಅಲಿ ಇಂದು ಸಂಸತ್ತಿನ ಹೊರಗೆ ತಮ್ಮ ಮಾಜಿ ಸಹೋದ್ಯೋಗಿಗೆ ನ್ಯಾಯ ಆಗ್ರಹಿಸಿ ಏಕಾಂಗಿಯಾಗಿ ಧರಣಿ ನಡೆಸಿದರು.

“ಸಂತ್ರಸ್ತೆಯನ್ನು ಅಪರಾಧಿಯನ್ನಾಗಿಸಬೇಡಿ,” ಎಂದು ಬರೆದಿರುವ ಭಿತ್ತಿಪತ್ರವನ್ನು ಅವರು ತಮ್ಮ ಕೊರಳಿಗೆ ನೇತಾಡಿಸಿದ್ದರು.

“ನಾನು ಈ ಫೋಸ್ಟರ್‌ ಹಾಕಿದ್ದೇನೆ, ಏಕೆಂದರೆ ಸಮಿತಿ ತನ್ನ ಶಿಫಾರಸಿನಲ್ಲಿ ನನ್ನನ್ನೂ ಉಲ್ಲೇಖಿಸಿದೆ, ಏಕಂದರೆ ನಾನು ಆಕೆಗೆ ನ್ಯಾಯಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಅವರಿಗೆ ಅವಕಾಶ ನೀಡಲಾಗಿಲ್ಲ,” ಎಂದು ಅಲಿ ಹೇಳಿದರು.

ಬಿಜೆಪಿ ಸಂಸದ ರಮೇಶ್‌ ಬಿಧೂರಿಯಿಂದ ಸಂಸತ್ತಿನಲ್ಲಿ ನಿಂದನೆಗೊಳಗಾಗಿರುವ ಅಲಿ ಅವರು ಕೂಡ ನೈತಿಕ ಸಮಿತಿಗೆ ದೂರು ಸಲ್ಲಿಸಿದವರು. ಈ ಕುರಿತು ಪ್ರತಿಕ್ರಿಯಿಸಿದ ಅವರು “ರಮೇಶ್‌ ಬಿಧೂರಿ ಲೋಕಸಭೆಯಲ್ಲಿ ಹೇಗೆ ವರ್ತಿಸಿದ್ದರೆಂದು ಇಡೀ ಜಗತ್ತು ನೋಡಿದೆ. ಆಗ ಸಂಸತ್ತಿನಲ್ಲಿ ನೈತಿಕತೆಯ ವಿಚಾರ ಇರಲಿಲ್ಲವೇ? ಈಗ ಏಕೆ? ಏನಿದು,” ಎಂದು ಆಕ್ರೋಶಿತರಾಗಿ ಅವರು ಪ್ರಶ್ನಿಸಿದರು.

“ಸಂಸತ್ತಿನಲ್ಲಿ ಗೌರವವೆಂಬುದು ಸೆಪ್ಟೆಂಬರ್‌ನಲ್ಲಿ ಸತ್ತು ಹೋಯಿತು. ಈಗ ಅವರು ಹೀಗೆ ಹೇಳುತ್ತಿದ್ದಾರೆ. ಇಂದು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್‌ ಕಣ್ಣೀರು ಸುರಿಸುತ್ತಿದ್ದಾರೆ,” ಎಂದು ಅಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News