ರೈಲ್ವೆ ನಿಲ್ದಾಣಗಳಲ್ಲಿ ಭಾರಿ ಜನಜಂಗುಳಿ: ಕಾಲ್ತುಳಿತದಂಥ ಪರಿಸ್ಥಿತಿ ನಿರ್ಮಾಣ

Update: 2023-11-12 07:14 GMT

Photo:X/@whoisanshul

ಹೊಸದಿಲ್ಲಿ: ದೀಪಾವಳಿಯನ್ನು ಆಚರಿಸಲು ಲಕ್ಷಾಂತರ ಮಂದಿ ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸುತ್ತಿದ್ದು, ಈ ರಜಾದಿನದ ಜನಜಂಗುಳಿಯನ್ನು ನಿಭಾಯಿಸುವಲ್ಲಿ ಕಳಪೆ ನಿರ್ವಹಣೆ ತೋರಿರುವ ಭಾರತೀಯ ರೈಲ್ವೆ ಇಲಾಖೆಯು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಈ ಕುರಿತು ಹಂಚಿಕೆಯಾಗುತ್ತಿರುವ ವಿಡಿಯೊಗಳಲ್ಲಿ ರೈಲುಗಳು ಕಿಕ್ಕಿರಿದು ತುಂಬಿರುವುದು ಕಂಡು ಬರುತ್ತಿದ್ದು, ಬೋಗಿಗಳ ಹೊರಗೆ ಉದ್ದನೆಯ ಸರತಿ ಸಾಲಿನಲ್ಲಿ ಸಿಕ್ಕಿ ಬಿದ್ದಿರುವ ಪ್ರಯಾಣಿಕರು ತಮ್ಮ ಗಮ್ಯವನ್ನು ತಲುಪಲು ಅಸಾಧ್ಯವಾಗಿರುವುದು ಸೆರೆಯಾಗಿದೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಪ್ರಯಾಣಿಕರೊಬ್ಬರು, ನಾನು ಟಿಕೆಟ್ ಖರೀದಿಸಿದ್ದರೂ, ಗುಜರಾತ್ ನ ವಡೋದರದಲ್ಲಿ ರೈಲಿನೊಳಗೆ ಪ್ರವೇಶಿಸಲು ಸಾಧ್ಯವಾಗದಿದ್ದರಿಂದ ಪ್ರಯಾಣವನ್ನು ತಪ್ಪಿಸಿಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ.

“ಭಾರತೀಯ ರೈಲ್ವೆಯ ಅತ್ಯಂತ ಕಳಪೆ ನಿರ್ವಹಣೆ. ನನ್ನ ದೀಪಾವಳಿಯನ್ನು ಹಾಳುಗೆಡವಿದ್ದಕ್ಕೆ ಧನ್ಯವಾದಗಳು. ನಿಮ್ಮ ಬಳಿ ದೃಢಪಟ್ಟಿರುವ ಎಸಿ ಟಿಕೆಟ್ ಇದ್ದರೂ ನೀವು ಪಡೆಯುವುದು ಇದೇ ಆಗಿದೆ. ಪೊಲೀಸರಿಂದಲೂ ಯಾವುದೇ ನೆರವು ದೊರೆಯಲಿಲ್ಲ. ನನ್ನಂತೆ ಅನೇಕ ಜನರು ರೈಲನ್ನು ಏರಲು ಸಾಧ್ಯವಾಗಲಿಲ್ಲ” ಎಂದು ಅವರು ಬರೆದಿದ್ದಾರೆ.

“ಕಾರ್ಮಿಕರ ಜಂಗುಳಿಯು ನನ್ನನ್ನು ರೈಲಿನಿಂದ ಹೊರಗೆ ಹಾಕಿತು. ಅವರು ರೈಲಿನ ಬಾಗಿಲಿಗೆ ಬೀಗ ಹಾಕಿ, ಯಾರೊಬ್ಬರಿಗೂ ರೈಲಿನ ಒಳ ಹೋಗಲು ಅವಕಾಶ ನೀಡಲಿಲ್ಲ. ಪೊಲೀಸರು ನನಗೆ ನೆರವು ನೀಡಲು ಸ್ಪಷ್ಟವಾಗಿ ನಿರಾಕರಿಸಿದರು ಹಾಗೂ ಆ ಪರಿಸ್ಥಿತಿಯ ಕುರಿತು ನಗಾಡಲು ಪ್ರಾರಂಭಿಸಿದರು” ಎಂದೂ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ವಡೋದರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ರೈಲ್ವೆ ನಿಲ್ದಾಣಗಳೂ ಕೂಡಾ ಭಾರಿ ಜನಜಂಗುಳಿಗೆ ಸಾಕ್ಷಿಯಾದವು. ಹೊಸದಿಲ್ಲಿಯಲ್ಲಿ ಪ್ರಯಾಣಿಕರು ತಮ್ಮ ರೈಲಿಗಾಗಿ ಕಾದು ನಿಂತಿರುವಾಗ ರೈಲು ನಿಲ್ದಾಣದಲ್ಲಿ ಕಿಕ್ಕಿರಿದ ಜನಜಂಗುಳಿ ನೆರೆದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಇದಕ್ಕೂ ಮುನ್ನ ಶನಿವಾರದಂದು ಸೂರತ್ ನಿಂದ ಬಿಹಾರಕ್ಕೆ ಹೊರಟಿದ್ದ ವಿಶೇಷ ರೈಲು ಹತ್ತಲು ಭಾರಿ ಜನಜಂಗುಳಿಯ ನಡುವೆ ನೂಕುನುಗ್ಗಲು ಸಂಭವಿಸಿದ್ದರಿಂದ ಕಾಲ್ತುಳಿತಕ್ಕೆ ಓರ್ವ ಬಲಿಯಾಗಿ, ಹಲವರು ಗಾಯಗೊಂಡ ಘಟನೆ ನಡೆದಿತ್ತು

ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಜನಜಂಗುಳಿ ಕಂಡು ಬಂದಿರುವುದರಿಂದ ರೈಲ್ವೆ ಇಲಾಖೆಯು 1,700 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದ್ದು, ಹೊಸದಾಗಿ 26 ಲಕ್ಷ ಬರ್ತ್ ಗಳು ಲಭ್ಯವಾಗುವಂತೆ ಮಾಡಿದೆ.

“ಪ್ರಯಾಣಿಕರ ಅನುಕೂಲಕ್ಕಾಗಿ ಅಂದಾಜು 26 ಲಕ್ಷ ಬರ್ತ್ ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ” ಎಂದು ರೈಲ್ವೆ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News