ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಕೋರ್ಟ್ ಗೆ ತಿಳಿಸಿದ ಬ್ರಿಜ್ ಭೂಷಣ್
ಹೊಸದಿಲ್ಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ)ದ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ನ್ಯಾಯಾಲಯದ ಮುಂದೆ ಲೈಂಗಿಕ ಕಿರುಕುಳದ ಆರೋಪಗಳ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
"ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು… ಸ್ಪರ್ಶಿಸುವುದು ಅಪರಾಧವಲ್ಲ" ಎಂದು ಬ್ರಿಜ್ ಭೂಷಣ್ ಪರ ವಕೀಲರು ವಾದ ಮಂಡಿಸಿದ್ದಾರೆ. ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಬ್ರಿಜ್ ಭೂಷಣ್ ಸಿಂಗ್ ಪರವಾಗಿ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್ ಅವರು ಕಾರ್ಯಕ್ರಮವೊಂದರಲ್ಲಿ ಕೋಚ್ ಆಟಗಾರರನ್ನು ತಬ್ಬಿಕೊಳ್ಳುವುದು ಸಾಮಾನ್ಯ ಎಂದು ಹೇಳಿದ್ದಾರೆ. ದಿಲ್ಲಿಯ ಅಶೋಕ ರಸ್ತೆ ಮತ್ತು ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಬ್ರಿಜ್ ಭೂಷಣ್ ತನ್ನನ್ನು 20-25 ಸೆಕೆಂಡುಗಳ ಕಾಲ ತಬ್ಬಿಕೊಂಡಿದ್ದಾರೆ ಎಂದು ಮಹಿಳಾ ಕುಸ್ತಿಪಟುವೊಬ್ಬರ ಆರೋಪದ ಕುರಿತು ಮಾತನಾಡಿದ ಬಿಜೆಪಿ ಸಂಸದರ ಪರ ವಕೀಲರು, ಕಾರ್ಯಕ್ರಮವೊಂದರಲ್ಲಿ ಕೋಚ್ ಆಟಗಾರರನ್ನು ತಬ್ಬಿಕೊಳ್ಳುವುದು ಸಾಮಾನ್ಯವಾಗಿದೆ.
ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಸ್ಪರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ, ಮಂಗೋಲಿಯಾ ಮತ್ತು ಜಕಾರ್ತದಲ್ಲಿ ನಡೆದ ಆಪಾದಿತ ಘಟನೆಯ ವಿಚಾರಣೆ ಭಾರತದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಬ್ರಿಜ್ ಭೂಷಣ್ ವಕೀಲರು ವಾದಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಗುರುವಾರ ಮುಂದುವರಿಸಲಿದೆ.