ಹುರಿಯತ್ ನಾಯಕ ಮಿರ್ವೈಝ್ ಗೃಹಬಂಧನದಿಂದ ಬಿಡುಗಡೆ

Update: 2023-09-22 18:03 GMT

ಮಿರ್ವೈಝ್ ಉಮರ್ ಫಾರೂಕ್ | Photo; PTI 

ಹೊಸದಿಲ್ಲಿ: ನಾಲ್ಕು ವರ್ಷಗಳ ಸುದೀರ್ಘ ಗೃಹಬಂಧನದ ಬಳಿಕ ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಶ್ರೀನಗರದ ಜಾಮಾ ಮಸೀದಿಯಲ್ಲಿ ನಡೆದ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಂಡರು.

ಶುಕ್ರವಾರದ ನಮಾಝ್ ನಲ್ಲಿ ಪಾಲ್ಗೊಳ್ಳುವ ಮುನ್ನ ಈ ಬಗ್ಗೆ ‘x’ನಲ್ಲಿ ಪೋಸ್ಟ್ ಮಾಡಿದ ಅವರು ‘‘ಸುಮಾರು 4 ವರ್ಷಗಳ (212 ಶುಕ್ರವಾರಗಳು) ಅಕ್ರಮ ಹಾಗೂ ನಿರಂಕುಶವಾಗಿ ಹೇರಲ್ಪಟ್ಟ ಕಾರಾಗೃಹವಾಸದ ಬಳಿಕ ಮಿರ್ವೈಝ್ ಕಾಶ್ಮೀರ್ ,ಶ್ರೀನಗರದ ಜಾಮಾ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಪ್ರವಚನವನ್ನು ನೀಡಲಿದ್ದಾರೆ’’ ಎಂದು ಹೇಳಿದ್ದಾರೆ.

ಮಿರ್ವೈಝ್ ಅವರು ಶತಮಾನಗಳಷ್ಟು ಪುರಾತನವಾದ ಶ್ರೀನಗರದ ಐತಿಹಾಸಿಕ ಜಾಮಾ ಮಸೀದಿಯ ಪಾಲಕರಾಗಿದ್ದಾರೆ. ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯ ರದ್ದತಿಯ ಬಳಿಕ ಬಂಧಿತರಾಗಿದ್ದ ಹಲವಾರು ರಾಜಕೀಯ ಹಾಗೂ ಪ್ರತ್ಯೇಕತಾವಾದಿ ನಾಯಕರಲ್ಲಿ ಮಿರ್ವೈಝ್ ಕೂಡಾ ಒಬ್ಬರು.

ಉಳಿದೆಲ್ಲರೂ ಬಂಧನದಿಂದ ಬಿಡುಗಡೆಗೊಂಡಿದ್ದರೂ, ಮಿರ್ವೈಝ್ ಅವರ ಚಲನವಲನಗಳಿಗೆ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಮಿರ್ವೈಝ್ ಅವರ ಚಲನವಲನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲವೆಂದು ಸರಕಾರವು ಪ್ರತಿಪಾದಿಸಿದೆಯಾದರೂ, ಸಂವಿಧಾನದ 370ನೇ ವಿಧಿ ರದ್ದುಗೊಂಡ 2019ರ ಆಗಸ್ಟ್ 5ರ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಹಾಗೂ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರವಚನವನ್ನು ಕೂಡಾ ನೀಡಿರಲಿಲ್ಲ. ಅಲ್ಲದೆ ಮಿರ್ವೈಝ್ ಅವರ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿತ್ತು

ತನ್ನ ‘ಗೃಹಬಂಧನ’ದ ಕುರಿತಾಗಿ ಮಿರ್ವೈಝ್ ಅವರು ಸಲ್ಲಿಸಿದ ಅರ್ಜಿಗೆ ಉತ್ತರಿಸುವಂತೆ, ಜಮ್ಮುಕಾಶ್ಮೀರ ಹಾಗೂ ಲಡಾಕ್ ಹೈಕೋರ್ಟ್ ಜಮ್ಮುಕಾಶ್ಮೀರ ಸರಕಾರಕ್ಕೆ ಸೆಪ್ಟೆಂಬರ್ 15ರಂದು ನೋಟಿಸ್ ಜಾರಿಗೊಳಿಸಿತ್ತು. ಮಿರ್ವೈಝ್ ಅರ್ಜಿಗೆ ಉತ್ತರಿಸಲು ಜಮ್ಮುಕಾಶ್ಮೀರ ಆಡಳಿತಕ್ಕೆ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News