ಹೈದರಾಬಾದ್ ಇನ್ನು ಮುಂದೆ ಆಂಧ್ರಪ್ರದೇಶದ ರಾಜಧಾನಿಯಲ್ಲ

Update: 2024-06-02 09:45 GMT

ಸಾಂದರ್ಭಿಕ ಚಿತ್ರ

ಹೈದರಾಬಾದ್: ರವಿವಾರದಿಂದ ಹೈದರಾಬಾದ್ ನಗರವು ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಜಂಟಿ ರಾಜಧಾನಿ ಎಂಬ ಸ್ಥಾನಮಾನವನ್ನು ಅಧಿಕೃತವಾಗಿ ಕಳೆದುಕೊಂಡಿದೆ. ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ, 2014ರ ಕಲಂ 5(1)ರ ಪ್ರಕಾರ ಹೈದರಾಬಾದ್ ಅನ್ನು 2014, ಜೂ.2ರಿಂದ ಹತ್ತು ವರ್ಷಗಳನ್ನು ಮೀರದ ಅವಧಿಗೆ ಉಭಯ ರಾಜ್ಯಗಳಿಗೆ ಸಾಮಾನ್ಯ ರಾಜಧಾನಿಯನ್ನಾಗಿ ನಿಯೋಜಿಸಲಾಗಿತ್ತು.

ಈ ಅವಧಿಯ ಬಳಿಕ ಹೈದರಾಬಾದ್ ತೆಲಂಗಾಣದ ಏಕೈಕ ರಾಜಧಾನಿಯಾಗಲಿದೆ ಮತ್ತು ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿಯನ್ನು ಸ್ಥಾಪಿಸಲಾಗುವುದು ಎಂದು ಕಾಯ್ದೆಯ ಕಲಂ 5(1) ಹೇಳುತ್ತದೆ.

ಪ್ರಸ್ತುತ ಅಮರಾವತಿ ಮತ್ತು ವಿಶಾಖಪಟ್ಟಣಂ ಕುರಿತು ವಿವಾದಗಳು ನ್ಯಾಯಾಲಯದಲ್ಲಿ ಬಾಕಿಯುಳಿದಿರುವುದರಿಂದ ಆಂಧ್ರಪ್ರದೇಶವು ಇನ್ನೂ ಕಾಯಂ ರಾಜಧಾನಿಯನ್ನು ಸ್ಥಾಪಿಸಿಲ್ಲ. ತಾನು ಅಧಿಕಾರದಲ್ಲಿ ಮುಂದುವರಿದರೆ ವಿಶಾಖಪಟ್ಟಣಂ ಆಡಳಿತಾತ್ಮಕ ರಾಜಧಾನಿಯಾಗಿ,ಅಮರಾವತಿ ಶಾಸಕಾಂಗ ರಾಜಧಾನಿಯಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿಯವರು ಇಂಗಿತ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ರಾಜ್ಯ ವಿಭಜನೆಯ ಬಳಿಕ ಆಂಧ್ರಪ್ರದೇಶವು ಹೈದರಾಬಾದ್ ಅನ್ನು ತನ್ನ ರಾಜಧಾನಿಯನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿದ್ದು, ನಗರದಲ್ಲಿ ಕೆಲವೇ ಕಟ್ಟಡಗಳನ್ನು ತನ್ನ ವಶದಲ್ಲಿ ಉಳಿಸಿಕೊಂಡಿದೆ. ಇತ್ತೀಚಿನ ಪ್ರತ್ಯೇಕತೆಯು ಸಾಂಕೇತಿಕವಾಗಿದ್ದರೂ ರಾಜಕೀಯ ವೀಕ್ಷಕರ ಪ್ರಕಾರ ಇದು ಉಭಯ ತೆಲುಗು ರಾಜ್ಯಗಳಿಗೆ ಪ್ರಮುಖ ಮೈಲಿಗಲ್ಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News