ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿಯನ್ನು ನೋಡಲು ಬಯಸಿದ್ದೆ, ಅವರನ್ನು ಆಹ್ವಾನಿಸಿಲ್ಲ ಯಾಕೆ ?: ರಾಹುಲ್ ಗಾಂಧಿ
ಹೊಸದಿಲ್ಲಿ: ಮಹಿಳೆ ಹಾಗೂ ದೇಶದ ಅತ್ಚುಚ್ಛ ಹುದ್ದೆಯನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಯಾಕೆ ಆಹ್ವಾನಿಸಿಲ್ಲ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ.
‘‘ನಾನು ಭಾರತದ ರಾಷ್ಟ್ರಪತಿಯನ್ನು ನೂತನ ಸಂಸತ್ ಭವನದ ಆವರಣದಲ್ಲಿ ನೋಡಲು ಬಯಸಿದ್ದೆ. ರಾಷ್ಟ್ರಪತಿ ಅವರು ಮಹಿಳೆ. ಅವರು ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಒಂದು ಮನೆಯಿಂದ ಇನ್ನೊಂದು ಮನೆಗೆ ವರ್ಗಾವಣೆಯಾಗುವ ಸಂದರ್ಭ ಅವರ ಉಪಸ್ಥಿತಿ ಅಗತ್ಯವಾಗಿತ್ತು’’ ಎಂದು ಅವರು ಹೇಳಿದ್ದಾರೆ.
ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭ ರಾಷ್ಟ್ರಪತಿ ಅವರ ಅನುಪಸ್ಥಿತಿಯನ್ನು ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ ಕೂಡ ಪ್ರಶ್ನಿಸಿದ್ದಾರೆ. ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವಂತೆ ಕೋರುವ ಸಾಂವಿಧಾನಿಕ ಮಸೂದೆ-2023 ಕುರಿತು ಚರ್ಚೆ ಆರಂಭಿಸಿದ ರಂಜನ್, 2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಹೊರತಾಗಿಯೂ ಬಿಜೆಪಿಗೆ ಈ ಮಸೂದೆಯನ್ನು ಜಾರಿಗೆ ತರಲು ಒಂಬತ್ತೂವರೆ ವರ್ಷ ಯಾಕೆ ಬೇಕಾಯಿತು? ಎಂದು ಪ್ರಶ್ನಿಸಿದ್ದಾರೆ.
‘‘ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಅವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ನಾನು ಪ್ರಶ್ನಿಸಲು ಬಯಸುತ್ತೇನೆ. ಅವರು ಮಹಿಳೆ ಹಾಗೂ ಬುಡಕಟ್ಟು ಸಮುದಾಯದವರು’’ ಎಂದು ಅವರು ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ತನ್ನ ಪಕ್ಷ ಬೆಂಬಲ ನೀಡುತ್ತದೆ ಎಂದು ಹೇಳಿದ ರಂಜನ್, ಈ ಮಸೂದೆಯನ್ನು ಅಂಗೀಕರಿಸಲು ಎಂದು ಅಧಿವೇಶನ ಕರೆಯದೆ ವಿಶೇಷ ಅಧಿವೇಶನ ಕರೆದಿರುವುದನ್ನು ಪ್ರಶ್ನಿಸಿದ್ದಾರೆ.
‘‘ಇದು ಪ್ರಚಾರಕ್ಕೆ ಹಾತೊರೆಯುವ ಅಭ್ಯಾಸ’’ ಎಂದು ಅವರು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆ ಮುನ್ನ ಮಹಿಳೆಯರನ್ನು ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಹಲವು ವಿಷಯಗಳ ಹಿಂದಿರುವ ಕೇಂದ್ರ ಸರಕಾರದ ಉದ್ದೇಶವನ್ನು ಪ್ರಶ್ನಿಸಿದ ಅವರು, ನೋಟುಗಳ ಅಮಾನ್ಯೀಕರಣದ ಮುನ್ನ ಕೇಂದ್ರ ಸರಕಾರ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ. ನಿಷೇಧಿಸಿದ ನೋಟುಗಳ ವಿನಿಮಯದ ಸಂದರ್ಭ 155 ಜನರು ಸಾವನ್ನಪ್ಪಿದರು ಎಂದು ಹೇಳಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಪರಿಚಯಿಸಿದಾಗ ಸರಕಾರ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ. ಲೈಂಗಿಕ ಕಿರುಕುಳದ ಆರೋಪದ ಕುರಿತಂತೆ ಬಿಜೆಪಿ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ಹಾಗೂ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನ ಮೆರವಣಿಗೆ ನಡೆಸಿದ ಸಂದರ್ಭ ಸರಕಾರದ ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ