ನಾನು ವಾರಕ್ಕೆ 85-90 ಗಂಟೆ ದುಡಿದಿದ್ದು ವ್ಯರ್ಥವಾಗಲಿಲ್ಲ: ಇನ್ಫೋಸಿಸ್ ನಾರಾಯಣಮೂರ್ತಿ
ಬೆಂಗಳೂರು: ಈಗಿನ ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂದು ತಿಂಗಳ ಹಿಂದಷ್ಟೇ ಸಲಹೆ ನೀಡಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ನಾನು ಕಂಪನಿಯನ್ನು ಪ್ರಾರಂಭಿಸುವಾಗ ಗಂಟೆಗಳ ಪರಿವೆಯಿಲ್ಲದೆ ದುಡಿದಿದ್ದೆ ಎಂದು ಸ್ಮರಿಸಿಕೊಂಡಿದ್ದಾರೆ. 'The Economic Times' ಪತ್ರಿಕೆಗೆ ಸಂದರ್ಶನ ನೀಡಿರುವ ಅವರು, ನಾನು 1994ರವರೆಗೆ ವಾರಕ್ಕೆ 85-90 ಗಂಟೆಗಳ ಕಾಲ ದುಡಿಮೆ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ.
"ನಾನು ಕಚೇರಿಗೆ 6.20ಕ್ಕೆಲ್ಲ ತೆರಳುತ್ತಿದ್ದೆ ಹಾಗೂ ರಾತ್ರಿ 8.30ಕ್ಕೆ ಕಚೇರಿಯನ್ನು ತೊರೆಯುತ್ತಿದ್ದೆ. ನಾನು ವಾರಕ್ಕೆ ಆರು ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದೆ" ಎಂದು ಹೇಳಿರುವ ಅವರು, "ಈಗ ಯಾವೆಲ್ಲ ದೇಶಗಳು ಸಂಪದ್ಭರಿತವಾಗಿಯೊ ಆ ಎಲ್ಲ ದೇಶಗಳ ಕಠಿಣ ದುಡಿಮೆಯನ್ನು ಹಾದು ಹೋಗಿವೆ ಎಂಬ ಸಂಗತಿ ನನಗೆ ತಿಳಿದಿದೆ" ಎಂದೂ ಪ್ರತಿಪಾದಿಸಿದ್ದಾರೆ.
"ಬಡತನವನ್ನು ತಪ್ಪಿಸಿಕೊಳ್ಳಬೇಕಿದ್ದರೆ ತುಂಬಾ ತುಂಬಾ ಪರಿಶ್ರಮದ ದುಡಿಮೆ ಮಾಡಬೇಕು ಎಂದು ನನ್ನ ಪೋಷಕರು ನನಗೆ ಕಲಿಸಿದ್ದರು. ಆದರೆ, ಇದು ಪ್ರತಿಯೊಂದು ಗಂಟೆಯಿಂದಲೂ ಉತ್ಪಾದಿಸಲು ಸಾಧ್ಯವಾದಾಗ ಮಾತ್ರ ಸಾಧ್ಯ" ಎಂದು ಅವರು ತಿಳಿಸಿದ್ದಾರೆ.
"ನನ್ನ ನಲವತ್ತಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಜೀವನದಲ್ಲಿ ನಾನು ವಾರಕ್ಕೆ 70 ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ" ಎಂದು ಅವರು ಪುನರುಚ್ಚರಿಸಿದ್ದಾರೆ. 1994ರವರೆಗೆ ವಾರಕ್ಕೆ ಆರು ದಿನಗಳ ಕೆಲಸವಿದ್ದಾಗ, ನಾನು ವಾರಕ್ಕೆ 85-90 ಗಂಟೆಗಳ ಕಾಲ ದುಡಿಮೆ ಮಾಡಿದ್ದೆ. ಅದು ವ್ಯರ್ಥವಾಗಲಿಲ್ಲ" ಎಂದು ಅವರು ಹೇಳಿದ್ದಾರೆ.