ಸಾಕು ನಾಯಿಯನ್ನು ಓಡಾಡಿಸಲು ಕ್ರೀಡಾಂಗಣವನ್ನು ಖಾಲಿಗೊಳಿಸಿದ್ದ ಐಎಎಸ್ ಅಧಿಕಾರಿ ರಿಂಕು ದುಗ್ಗಾಗೆ ಕಡ್ಡಾಯ ನಿವೃತ್ತಿ

Update: 2023-09-28 15:27 GMT

                                                                                        Photo: X\ The Indian Express

ಹೊಸದಿಲ್ಲಿ: ತನ್ನ ನಾಯಿಯನ್ನು ಓಡಾಡಿಸಲು ದಿಲ್ಲಿ ಕ್ರೀಡಾಂಗಣವನ್ನು ಖಾಲಿಗೊಳಿಸಿದ್ದ ಐಎಎಸ್ ಅಧಿಕಾರಿ ರಿಂಕು ದುಗ್ಗಗೆ ಕಡ್ಡಾಯ ನಿವೃತ್ತಿ ನೀಡಿ ಸರ್ಕಾರ ಆದೇಶಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಿಂಕು ದುಗ್ಗಾ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ಅವರನ್ನು ನಿವೃತ್ತಿಗೊಳಿಸಲಾಗಿದೆ ಎಂದು ವರದಿಯಾಗಿದ್ದು, "ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದ್ದರೆ ಯಾವುದೇ ಸರ್ಕಾರಿ ನೌಕರರನ್ನು ನಿವೃತ್ತಿಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಿಂಕು ದುಗ್ಗಾ ಅರುಣಾಚಲ ಪ್ರದೇಶ-ಗೋವಾ-ಮಿಝೋರಾಂ ಕೇಡರ್‌ನ 1994ನೇ ಬ್ಯಾಚ್ ಐಎಎಸ್ ಅಧಿಕಾರಿ. ಅವರ ಪತಿ ಸಂಜೀವ್ ಖೀರ್ವರ್ ಕೂಡಾ 1994ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿದ್ದರು. ತಮ್ಮ ನಾಯಿಯನ್ನು ಸಂಜೆಯ ನಡಿಗೆಗೆ ಕರೆದುಕೊಂಡು ಬರಲು ದಿಲ್ಲಿಯ ತ್ಯಾಗರಾಜ್ ಕ್ರೀಡಾಂಗಣದಿಂದ ತರಬೇತಿನಿರತ ಅಥ್ಲೀಟ್‌ಗಳನ್ನು ಬಲವಂತವಾಗಿ ಕ್ರೀಡಾಂಗಣದಿಂದ ಹೊರ ಕಳಿಸಲಾಗಿತ್ತು ಎಂದು Indian Express ಪತ್ರಿಕೆಯು ವರದಿ ಮಾಡಿದ ನಂತರ ಇವರಿಬ್ಬರನ್ನೂ ದಿಲ್ಲಿಯಿಂದ ಹೊರಗೆ ವರ್ಗಾಯಿಸಲಾಗಿತ್ತು.

ನಂತರ, ದಿಲ್ಲಿಯ ಮುಖ್ಯ ಕಾರ್ಯದರ್ಶಿಗಳ ತ್ಯಾಗರಾಜ್ ಕ್ರೀಡಾಂಗಣದ ಸೌಲಭ್ಯಗಳನ್ನು ಈ ದಂಪತಿಗಳು ದುರುಪಯೋಗ ಪಡಿಸಿಕೊಂಡಿರುವ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು.

ಈ ವರದಿಯು ಸಾರ್ವಜನಿಕ ಹಾಗೂ ಅಥ್ಲೀಟ್ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರಿಂಕು ದುಗ್ಗಾ ಅವರ ಸೇವಾ ಮೌಲ್ಯಮಾಪನ ನಡೆಸಿದ ನಂತರ ಮೂಲಭೂತ ನಿಯಮಗಳು (ಎಫ್‌ಆರ್) 56(j), ಕೇಂದ್ರ ನಾಗರಿಕ ಸೇವೆಗಳು (ಸಿಸಿಎಸ್) ನಿಯಮ 48 ಹಾಗೂ ಪಿಂಚಣಿ ನಿಯಮಗಳು, 1972ರ ಅಡಿ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News