ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಿದರೆ, ಸ್ಪೀಕರ್ ಅವಿರೋಧ ಆಯ್ಕೆಗೆ ನಾವು ಸಿದ್ಧ : ಕಾಂಗ್ರೆಸ್ ಸಂಸದ ಕೆ ಸಿ ವೇಣುಗೋಪಾಲ್

Update: 2024-06-25 09:47 GMT

ಕೆ ಸಿ ವೇಣುಗೋಪಾಲ್ |  PC : ANI 

ಹೊಸದಿಲ್ಲಿ : ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಿದರೆ, ಸ್ಪೀಕರ್ ಅವಿರೋಧ ಆಯ್ಕೆಗೆ ನಾವು ಸಿದ್ಧ ಎಂದು ಸಂಸದ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೆ ಸಿ ವೇಣುಗೋಪಾಲ್ ಅವರು, “ಇದುವರೆಗೂ ಲೋಕಸಭೆಯಲ್ಲಿ ನಡೆದು ಬಂದ ಸಂಪ್ರದಾಯದಂತೆ ಆಡಳಿತ ಪಕ್ಷ ಸ್ಪೀಕರ್ ಹುದ್ದೆ ವಹಿಸಿಕೊಂಡರೆ, ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ಬಿಟ್ಟುಕೊಡಲಾಗುತ್ತಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 10 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗಲೂ ಈ ಸಂಪ್ರದಾಯದಂತೆ ನಾವು ನಡೆದುಕೊಂಡಿದ್ದೆವು. ವಿಪಕ್ಷಗಳ ಸಹಕಾರದಲ್ಲಿ ಲೋಕಸಭೆಯ ಕಲಾಪಗಳು ಸೂಸೂತ್ರವಾಗಿ ನಡೆಯುವಂತೆ ಮಾಡುವುದು ಇದರ ಉದ್ದೇಶ” ಎಂದರು.

“ಇಂದು ಬೆಳಿಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಮಾತನಾಡಿ, ಕೋಟಾ ಕ್ಷೇತ್ರದ ಸಂಸದ ಓಂ ಬಿರ್ಲಾ ಅವರನ್ನೇ ಸ್ಪೀಕರ್ ಹುದ್ದೆಯಲ್ಲಿ ಮುಂದುವರೆಸುವ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ವಿಪಕ್ಷಗಳ ಸಹಕಾರ ಬೇಕು ಎಂದು ಕೇಳಿದ್ದರು. ಇದಕ್ಕೆ ಒಪ್ಪಿದ್ದ ಖರ್ಗೆಯವರು, ಪ್ರತಿಯಾಗಿ ವಿಪಕ್ಷಗಳಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡುವಂತೆ ವಿನಂತಿ ಮಾಡಿದ್ದರು. ಈ ಬಗ್ಗೆ ತಿಳಿಸುತ್ತೇನೆ ಎಂದಿದ್ದ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿಯೇ ಇಲ್ಲ” ಎಂದರು.

“ನಾಮಪತ್ರ ಸಲ್ಲಿಸಲು ಬೆಳಿಗ್ಗೆ 11 ಗಂಟೆಯವರಗೆ ನಾವು ಕಾದೆವು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಚಿಕಿತ್ಸೆಗಾಗಿ ಹೊರ ಹೋದರು. 11 ಗಂಟೆಯ ಸುಮಾರಿಗೆ ನನ್ನನ್ನು ರಾಜನಾಥ ಸಿಂಗ್ ಅವರ ಕೊಠಡಿಗೆ ಬರುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ, ಓಂ ಬಿರ್ಲಾ ಅವರ ನಾಮಪತ್ರಕ್ಕೆ ಅವಿರೋಧ ಆಯ್ಕೆಗೆ ಬೆಂಬಲ ಸೂಚಿಸಿ ಸಹಿ ಹಾಕುವಂತೆ ಹೇಳಿದರು. ನಾನು ಇದು ಸರಿಯಲ್ಲ. ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ನೀಡಿದರೆ ಮಾತ್ರ ಅವಿರೋಧ ಆಯ್ಕೆ ನಡೆಯಲಿದೆ ಎಂದು ತಿಳಿಸಿದೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.

“ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ನೀಡಿದರೆ, ಸ್ಪೀಕರ್ ಹುದ್ದೆಯ ಅವಿರೋಧ ಆಯ್ಕೆ ನಡೆಯಲಿದೆ. ನಿರ್ಧಾರ ತಿಳಿಸಲು ಅವರಿಗೆ ಇನ್ನೂ ಸಮಯವಿದೆ” ಎಂದು ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News