ಜಾತಿಗಣತಿಯನ್ನು ಈಗಲೇ ನಡೆಸಿ, ಇಲ್ಲದಿದ್ದರೆ ಮುಂದಿನ ಪ್ರಧಾನಿ ಅದನ್ನು ನಡೆಸುವುದನ್ನು ನೀವು ನೋಡುತ್ತೀರಿ: ಮೋದಿಗೆ ರಾಹುಲ್ ಕಿವಿಮಾತು

Update: 2024-08-25 16:32 GMT

Credit: PTI File Photos

ಹೊಸದಿಲ್ಲಿ : ಜಾತಿಗಣತಿಗಾಗಿ ದೇಶದ ಬೇಡಿಕೆಯನ್ನು ತಕ್ಷಣವೇ ಈಡೇರಿಸುವಂತೆ ರವಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಇಲ್ಲದಿದ್ದರೆ ಮುಂದಿನ ಪ್ರಧಾನಿ ಜಾತಿಗಣತಿ ನಡೆಸುವುದನ್ನು ಅವರು ನೋಡಲಿದ್ದಾರೆ ಎಂದು ಹೇಳಿದ್ದಾರೆ.

ದೇಶವ್ಯಾಪಿ ಜಾತಿಗಣತಿಯನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ರಾಹುಲ್ ಅದರೊಂದಿಗೆ ‘ದೇಶದ ಮನಃಸ್ಥಿತಿಯ ಸಮೀಕ್ಷೆ ’ ಕುರಿತು ಕಾಂಗ್ರೆಸ್‌ನ ಪೋಸ್ಟ್‌ನ್ನು ಟ್ಯಾಗ್ ಮಾಡಿದ್ದಾರೆ. ಮಾಧ್ಯಮ ಗುಂಪೊಂದು ಆಗಸ್ಟ್‌ನಲ್ಲಿ ಈ ಸಮೀಕ್ಷೆಯನ್ನು ನಡೆಸಿದ್ದು, ಜಾತಿಗಣತಿಯನ್ನು ಕೈಗೊಳ್ಳಲೇಬೇಕು ಎಂದು ಶೇ.74ರಷ್ಟು ಜನರು ಹೇಳಿದ್ದಾರೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಇಂತಹವರ ಸಂಖ್ಯೆ ಶೇ.59ರಷ್ಟಿತ್ತು ಎಂದು ಅದು ತಿಳಿಸಿತ್ತು.

‘ಮೋದಿಜಿ, ನೀವು ಜಾತಿಗಣತಿಯನ್ನು ನಿಲ್ಲಿಸಲು ಯೋಚಿಸುತ್ತಿದ್ದರೆ ನೀವು ಕನಸು ಕಾಣುತ್ತಿದ್ದೀರಿ. ಅದನ್ನೀಗ ಯಾವುದೇ ಶಕ್ತಿಯು ನಿಲ್ಲಿಸಲು ಸಾಧ್ಯವಿಲ್ಲ. ಭಾರತದ ಆದೇಶ ಹೊರಬಿದ್ದಿದೆ. ಶೀಘ್ರವೇ ಶೇ.90ರಷ್ಟು ಭಾರತೀಯರು ಜಾತಿಗಣತಿಯನ್ನು ಬೆಂಬಲಿಸಲಿದ್ದಾರೆ ’ ಎಂದು ರಾಹುಲ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಶನಿವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ‘ಸಂವಿಧಾನ ಸಮ್ಮಾನ್ ಸಮ್ಮೇಳನ ’ವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಜಾತಿಗಣತಿಗೆ ಆಗ್ರಹಿಸಿ,ದೇಶದ ಶೇ.90ರಷ್ಟು ಜನರು ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಮತ್ತು ಅವರ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News