ಮಣಿಪುರದ ನಿರಾಶ್ರಿತ ಶಿಬಿರಗಳ ಮತಗಟ್ಟೆಗಳಲ್ಲಿ ಶೇ. 95 ಮತದಾನ
ಇಂಫಾಲ : ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಆಂತರಿಕವಾಗಿ ನಿರಾಶ್ರಿತರಾಗಿರುವ ಜನರಿಗಾಗಿನ ಪರಿಹಾರ ಶಿಬಿರಗಳಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಮತಗಟ್ಟೆಗಳಲ್ಲಿ ದಾಖಲೆ ಪ್ರಮಾಣದ ಶೇ. 95ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಪಿ.ಕೆ.ಝಾ ತಿಳಿಸಿದ್ದಾರೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಆಂತರಿಕವಾಗಿ ನಿರಾಶ್ರಿತರಾಗಿರುವ ಜನರು ತಮ್ಮ ಬೇಡಿಕೆಯನ್ನು ತಮ್ಮ ಮತಗಳ ಮೂಲಕ ಪ್ರತಿಫಲನಗೊಳ್ಳಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಡಿ ರಾಜ್ಯವಾದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಪ್ರಕ್ಷುಬ್ಧತೆ ಮುಂದುವರಿದಿದ್ದು, ಲೋಕಸಭಾ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಕುಕಿ-ಝೊ ನಾಗರಿಕ ಸಮಾಜ ಗುಂಪುಗಳು ಕರೆ ನೀಡಿದ್ದವು. ಕಾಂಗ್ಪೋಕ್ಪಿ ಜಿಲ್ಲೆಯು ಕುಕಿ-ಝೋ ಸಮುದಾಯದ ಬಾಹುಳ್ಯ ಹೊಂದಿರುವ ಜಿಲ್ಲೆಯಾಗಿದೆ. ಈ ಸಮುದಾಯದ ಬಾಹುಳ್ಯ ಹೊಂದಿರುವ ಮತ್ತೊಂದು ಜಿಲ್ಲೆಯಾದ ಚುರಾಚಂದಪುರದಲ್ಲಿ ಕೊಂಚ ಮಟ್ಟಿನ ಮತದಾನವಾಗಿದ್ದರೂ, ಶಾಂತಿಯುತ ಸಂದರ್ಭಗಳಲ್ಲಿ ನಡೆಯುತ್ತಿದ್ದಷ್ಟು ಮತದಾನ ನಡೆದಿಲ್ಲ ಎಂದು ವರದಿಯಾಗಿದೆ.
ನಿನ್ನೆ ಸಂಜೆ ನಾಲ್ಕು ಗಂಟೆಗೆ ಮುಕ್ತಾಯವಾದ ಮತದಾನದಲ್ಲಿ ಮಣಿಪುರ ರಾಜ್ಯದಲ್ಲಿ ಶೇ. 68ರಷ್ಟು ಮತದಾನವಾಗಿದ್ದು, ಇದು ಈ ರಾಜ್ಯದಲ್ಲಿ ಈವರೆಗೆ ಆಗಿರುವ ಅತಿ ಕಡಿಮೆ ಮತದಾನ ಎಂದು ಹೇಳಲಾಗಿದೆ.
ಈ ನಡುವೆ, ಕೆಲವು ಮತಗಟ್ಟೆಗಳಲ್ಲಿ ಧ್ವಂಸ ಕೃತ್ಯ ಹಾಗೂ ಹಿಂಸಾಚಾರ ನಡೆದಿದೆ ಎಂಬ ವರದಿಗಳು ಹಾಗೂ ಅಭ್ಯರ್ಥಿಗಳು ಮರು ಮತದಾನಕ್ಕೆ ಆಗ್ರಹಿಸಿರುವ ಮತಗಟ್ಟೆಗಳಲ್ಲಿನ ಮರು ಮತದಾನದ ಅಗತ್ಯತೆ ಕುರಿತು ವರದಿ ಸಲ್ಲಿಸುವಂತೆ ಚುನಾವಣಾಧಿಕಾರಿಗಳಿಗೆ ಮಣಿಪುರ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಝಾ ಸೂಚಿಸಿದ್ದಾರೆ. ವರದಿಗಳನ್ನು ಪರಿಶೀಲಿಸಿದ ನಂತರ, ಮರು ಮತದಾನದ ಅಗತ್ಯವಿದೆ ಎಂದು ಚುನಾವಣಾ ಆಯೋಗವು ನಿರ್ಧರಿಸಿದರೆ ಮಾತ್ರ ಅಂತಹ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.