ಕೇವಲ 6 ವರ್ಷದಲ್ಲಿ ಭಾರತದಲ್ಲಿ ಸರ್ವರನ್ನು ಒಳಗೊಂಡ ಆರ್ಥಿಕತೆ
ಹೊಸದಿಲ್ಲಿ: ಆರ್ಥಿಕತೆಯಲ್ಲಿ ಸರ್ವರನ್ನು ಒಳಗೊಳಿಸುವ ಗುರಿಯನ್ನು ಕೇವಲ ಆರು ವರ್ಷಗಳಲ್ಲಿ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇಲ್ಲದಿದ್ದರೆ ಇದಕ್ಕೆ 47 ವರ್ಷಗಳೇ ಬೇಕಾಗುತ್ತಿತ್ತು ಎಂದು ವಿಶ್ವಬ್ಯಾಂಕ್ ಸಿದ್ಧಪಡಿಸಿದ ಜಿ20 ವರದಿ ಹೇಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಬೆಂಬಲದಿಂದ ಸರ್ವರನ್ನು ಒಳಗೊಂಡ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಭಾರತ ಅಗಾಧ ಸಾಧನೆ ಮಾಡಿದೆ! ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ಜಿ20 ವರದಿಯೊಂದು ಭಾರತದ ಬೆಳವಣಿಗೆಯ ಬಗ್ಗೆ ಅತ್ಯಂತ ಆಸಕ್ತಿಯ ವಿಚಾರವೊಂದನ್ನು ಬಹಿರಂಗಪಡಿಸಿದೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್)ನಲ್ಲಿ ಬರೆದಿದ್ದಾರೆ.
‘‘ಸರ್ವರನ್ನು ಒಳಗೊಂಡ ಆರ್ಥಿಕತೆಯನ್ನು ಭಾರತ ಕೇವಲ ಆರು ವರ್ಷಗಳಲ್ಲಿ ಸಾಧಿಸಿದೆ. ಇಲ್ಲದಿದ್ದರೆ ಇದಕ್ಕೆ 47 ಸುದೀರ್ಘ ವರ್ಷಗಳೇ ಬೇಕಾಗುತ್ತಿದ್ದವು. ನಮ್ಮ ಸದೃಢ ಡಿಜಿಟಲ್ ಪೇಮೆಂಟ್ ಮೂಲಸೌಕರ್ಯ ಮತ್ತು ನಮ್ಮ ಜನರ ಚೈತನ್ಯವನ್ನು ಅಭಿನಂದಿಸುತ್ತೇನೆ. ಇದು ನಿಜವಾಗಿಯೂ ಕ್ಷಿಪ್ರ ಅಭಿವೃದ್ಧಿ ಮತ್ತು ಹೊಸತನದ ಪುರಾವೆಗಳಾಗಿವೆ’’ ಎಂದು ಅವರು ಹೇಳಿದ್ದಾರೆ.
ಸರ್ವರನ್ನು ಒಳಗೊಂಡ ಆರ್ಥಿಕತೆಗಾಗಿ ಆಧಾರ್ ಮತ್ತು ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಶಕ್ತಿಯನ್ನು ಅನಾವರಣಗೊಳಿಸಿರುವುದಕ್ಕಾಗಿ ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ಜಿ20 ವರದಿಯು ಶ್ಲಾಘಿಸಿದೆ. ಅಗಾಧ ಡಿಜಿಟಲ್ ಬದಲಾವಣೆಯನ್ನು ತರುವಲ್ಲಿ ಡಿಪಿಐ ಮಹತ್ವದ ಪಾತ್ರ ವಹಿಸಿದೆ ಎಂದು ಅದು ಹೇಳಿದೆ.