ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳ : ಆರೋಗ್ಯ ಸಚಿವ ನಡ್ಡಾ ಕಳವಳ
ಹೊಸದಿಲ್ಲಿ : ಭಾರತದಲ್ಲಿ ಕ್ಯಾನ್ಸರ್ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಿದೆಯೆಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಪ್ರತಿ ವರ್ಷ ಶೇ.2.5ರಷ್ಟು ಏರಿಕೆಯಾಗುತ್ತಿದೆ. ಪುರುಷರಲ್ಲಿ ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿದ್ದರೆ, ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದರು.
ಪ್ರತಿ ವರ್ಷವೂ ದೇಶದಲ್ಲಿ 15.5 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ನಡ್ಡಾ ತಿಳಿಸಿದ್ದಾರೆ.
‘‘ಶೆಡ್ಯೂಲ್ 1ರಲ್ಲಿರುವ 131 ಅತ್ಯವಶ್ಯಕ ಕ್ಯಾನ್ಸರ್ ಔಷಧಿಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಹಾಗೂ ದರ ನಿಗದಿಯನ್ನು ಸರಕಾರವು ನಿರ್ಧರಿಸಲಿದೆ. ಇವೆಲ್ಲವೂ ಸಾಮಾನ್ಯವಾಗಿ ಬಳಕೆಯಾಗುವ ಔಷಧಿಗಳು’’ ಎಂದು ನಡ್ಡಾ ತಿಳಿಸಿದರು.
ಈ ದರ ನಿಯಂತ್ರಣದಿಂದಾಗಿ ರೋಗಿಗಳು ಒಟ್ಟಾರೆ ಸುಮಾರು 294 ರ ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದರು.
‘‘ ರಾಷ್ಟ್ರೀಯ ಔಷಧಿ ದರ ನಿಗದಿ ಪ್ರಾಧಿಕಾರ (ಎನ್ಪಿಪಿಎ)ದ ಪಟ್ಟಿಯಲ್ಲಿರುವ 28 ಔಷಧಿ ಸಂಯೋಜನೆಗಳಿದ್ದು ಅವುಗಳ ದರವನ್ನು ಕೂಡಾ ಸರಕಾರವು ನಿಯಂತ್ರಿಸಿದೆ” ಎಂದು ಅವರು ತಿಳಿಸಿದರು.
ಕ್ಯಾನ್ಸರ್ ಔಷಧಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ತಾವು ಶ್ರಮಿಸುವುದಾಗಿ ಅವರು ಹೇಳಿದರು.
ದೇಶದ ಆರೋಗ್ಯಪಾಲನಾ ಮೂಲಸೌಕರ್ಯಗಳ ಕುರಿತ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ನಡ್ಡಾ ಅವರು ವೈದ್ಯಕೀಯ ಕಾಲೇಜುಗಳನ್ನು ವಿಸ್ತರಿಸಲಾಗುತ್ತಿದ್ದು,, ಇದರಿಂದ ಅಧಿಕ ಸಂಖೆಯಲ್ಲಿ ವೈದ್ಯರು ಲಭ್ಯವಾಗಲಿದ್ದಾರೆ ಎಂದರು.