"ಬಜೆಟ್ ನಲ್ಲಿ ಕಾರಾಗೃಹಕ್ಕೆ ಹೆಚ್ಚಿನ ಅನುದಾನ ನೀಡಿ, ಮುಂದಿನ ಸರದಿ ನಿಮ್ಮದು": ಸಂಜಯ್ ಸಿಂಗ್ ವ್ಯಂಗ್ಯ
ಹೊಸದಿಲ್ಲಿ: ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಹಾಕುತ್ತಿರುವುದರಿಂದ ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕಾರಾಗೃಹಗಳ ಅನುದಾನವನ್ನು ಹೆಚ್ಚಳ ಮಾಡಬೇಕಿತ್ತು ಎಂದು ಗುರುವಾರ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಕಾರಾಗೃಹಗಳಿಗೆ ಅನುದಾನ ಕಡಿತಗೊಳಿಸಿರುವುದರ ಕುರಿತು ವ್ಯಂಗ್ಯವಾಡಿದ ಸಂಜಯ್ ಸಿಂಗ್, “ನೀವೆಲ್ಲರೂ ಜೈಲಿಗೆ ಹೋಗುವುದರಿಂದ ಜೈಲುಗಳ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ” ಎಂದು ಲೇವಡಿ ಮಾಡಿದರು.
ದಿಲ್ಲಿ ಅಬಕಾರಿ ನೀತಿ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರಿಗೆ ಅಕ್ಟೋಬರ್ 2023ರಲ್ಲಿ ಜಾಮೀನು ದೊರೆತಿತ್ತು.
ರಾಜ್ಯಸಭೆಯಲ್ಲಿ ಈ ಬಾರಿ ಕೇಂದ್ರ ಬಜೆಟ್ ಕುರಿತು ಭಾಷಣ ಮಾಡಿದ ಸಂಜಯ್ ಸಿಂಗ್, ಈಗ ನಡೆಯುತ್ತಿರುವ ಬಂಧನಗಳ ಹಿನ್ನೆಲೆಯಲ್ಲಿ ಕಾರಾಗೃಹಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ವ್ಯಂಗ್ಯವಾಗಿ ಸಲಹೆ ನೀಡಿದರು. “ನಾನು ಬಜೆಟ್ ಅನ್ನು ಓದುತ್ತಿದ್ದೇನೆ. ಅವರು ಕಾರಾಗೃಹಗಳ ಬಜೆಟ್ ಅನ್ನು ಕಡಿತಗೊಳಿಸಿದ್ದಾರೆ. ಕನಿಷ್ಠ ಪಕ್ಷ ಕಾರಾಗೃಹಗಳ ಬಜೆಟ್ ಅನ್ನು ಏರಿಕೆ ಮಾಡಿ. ನೀವು ಕೇವಲ ರೂ. 300 ಕೋಟಿಯನ್ನು ಮೀಸಲಿರಿಸಿದ್ದೀರಿ. ಇಂದು ನೀವು ನನ್ನನ್ನು ಕಾರಾಗೃಹಕ್ಕೆ ಕಳಿಸಿದ್ದೀರಿ. ನಾಳೆ ನೀವು ಕಾರಾಗೃಹಕ್ಕೆ ಹೋಗಲಿದ್ದೀರಿ. ಕಾರಾಗೃಹಗಳ ಬಜೆಟ್ ಅನ್ನು ಹೆಚ್ಚಿಸಿ, ಅವುಗಳನ್ನು ಸುಧಾರಿಸಿ. ಮುಂದಿನ ಸರದಿ ನಿಮ್ಮದು” ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್, ಸಂಜಯ್ ಸಿಂಗ್ ಅವರ ಭಾಷಣವನ್ನು ಭಾವನಾತ್ಮಕ ಎಂದು ಕರೆದರಲ್ಲದೆ, ಸಭಾಪತಿ ಜೆ.ಪಿ.ನಡ್ಡಾ ಅವರಿಗೆ ಸಂಜಯ್ ಸಿಂಗ್ ಅವರ ಸಲಹೆಯನ್ನು ಪರಿಗಣಿಸುವಂತೆ ಸೂಚಿಸಿದರು.
“ಅವರು ಕಾರಾಗೃಹಗಳ ಬಜೆಟ್ ಅನ್ನು ಹೆಚ್ಚಿಸುವಂತೆ ಭಾವನಾತ್ಮಕ ಮನವಿ ಮಾಡಿದ್ದಾರೆ. ನೀವದನ್ನು ಪರಿಶೀಲಿಸಬೇಕು” ಎಂದು ಜೆ.ಪಿ.ನಡ್ಡಾಗೆ ಅವರು ಹಾಸ್ಯಮಯ ಧಾಟಿಯಲ್ಲಿ ಸಲಹೆ ನೀಡಿದರು.
ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇದುವರೆಗೆ ವಿರೋಧ ಪಕ್ಷಗಳ ನಾಯಕರಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹಾಗೂ ಭಾರತ್ ರಾಷ್ಟ್ರ ಸಮಿತಿಯ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರನ್ನು ಬಂಧಿಸಿದೆ.