ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಭಾವಶಾಲಿ ಹೆಜ್ಜೆ ಇರಿಸಿದೆ: ಪ್ರಲ್ಹಾದ ಜೋಶಿ
ಹೊಸದಿಲ್ಲಿ: ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನಕ್ಕಾಗಿ ಭಾರತ ಪ್ರಭಾವಶಾಲಿ ಹೆಜ್ಜೆ ಇರಿಸಿದೆ. ಆರ್ಥಿಕತೆ ಜತೆಗೆ ಪರಿಸರ ಕಾಳಜಿ, ನಿರ್ವಹಣೆಗೆ ಮಹತ್ವ ನೀಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನವದೆಹಲಿಯಲ್ಲಿ ಹನಿವೆಲ್ ಮತ್ತು CNBC-TV18 ಆಯೋಜಿಸಿದ್ದ ಭಾರತ ಶಕ್ತಿ ಪರಿವರ್ತನಾ ಶೃಂಗಸಭೆ ಉದ್ದೇಶಿಸಿ ಮಾತನಾಡಿದರು.
ಸೌರ ವಿದ್ಯುತ್ ಸ್ಥಾವರ ಸುಂಕ ಶೇ.76 ಇಳಿಕೆ: ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲೆಂದು ಭಾರತ ಸರ್ಕಾರ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳಿಗೆ ಇದ್ದ ಸುಂಕವನ್ನು ಶೇ.76ರಷ್ಟು ಇಳಿಸಿದೆ. 2010-11ರಲ್ಲಿ ರೂ.10.95 ಇದ್ದ ಸುಂಕ 2023-24 ರ ಅವಧಿಯಲ್ಲಿ ಕೇವಲ ರೂ.2.60ಗೆ ಇಳಿಸಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರ ಭಾರತೀಯ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದ ತ್ವರಿತ ಬೆಳವಣಿಗೆ ಮತ್ತು ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ ಎಂದರು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಒಂದು ಸ್ಪರ್ಧಾತ್ಮಕ ಉದ್ಯಮವನ್ನೇ ಸೃಷ್ಟಿಸಲಿದೆ. ಅಷ್ಟರ ಮಟ್ಟಿಗೆ ಸದೃಢವಾಗಿದೆ. ಭಾರತದಲ್ಲಿ ಸೌರಶಕ್ತಿಯ ವೆಚ್ಚ ವಿಶ್ವದಲ್ಲೇ ಅತ್ಯಂತ ಅಗ್ಗವಾಗಿದೆ. ಹೆಚ್ಚುವರಿ ವಿದ್ಯುಚ್ಛಕ್ತಿ ಸಂಗ್ರಹಿಸಲು ಯೋಜಿಸಿದ್ದು, ದೊಡ್ಡ ಪ್ರಮಾಣದ ಗ್ರಿಡ್ ಸಂಗ್ರಹಣೆಯಲ್ಲಿ ಯಶಸ್ಸು ಅತ್ಯಗತ್ಯ. ಇದಕ್ಕಾಗಿ PSP ಯೋಜನೆಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದೆ. 24,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚಿನ ದಕ್ಷತೆಯ ಸೌರ PV ಮಾದರಿ ಘಟಕಕ್ಕೆ PLI ಯೋಜನೆ ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ 48,337 MW ಸಾಮರ್ಥ್ಯದ ಉನ್ನತ-ದಕ್ಷತೆಯ ಸೌರ PV ಮಾದರಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 10 ವರ್ಷಗಳಲ್ಲಿ 75.52 GW ನಿಂದ 203 GW ಗಿಂತ ಹೆಚ್ಚಾಗಿದೆ. 165 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ಭಾರತದಲ್ಲಿ ಒಟ್ಟು ಆರ್‌ಇ ಉತ್ಪಾದನೆಯು 193.50 ಬಿಲಿಯನ್ ಯುನಿಟ್‌ಗಳಿಂದ 2023-24ರಲ್ಲಿ 360 ಬಿಲಿಯನ್ ಯುನಿಟ್ ಗೆ ಏರಿಕೆಯಾಗಿದೆ, ಇದು ಶೇ.86ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು.
3 ತಿಂಗಳಲ್ಲಿ 2.5 ಲಕ್ಷಕ್ಕೂ ಅಧಿಕ ಸೂರ್ಯ ಘರ್: ತಾವು ನವೀಕರಿಸಬಹುದಾದ ಇಂಧನ ಖಾತೆ ವಹಿಸಿಕೊಂಡ ಮೇಲೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಛಾವಣಿ ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟು 3.28 ಲಕ್ಷ ಅಳವಡಿಕೆಗಳ ಪೈಕಿ ಶೇ.75ಕ್ಕೂ ಹೆಚ್ಚು ಈ ಮೂರು ತಿಂಗಳಲ್ಲಿ ಆಗಿದೆ ಎಂದು ತಿಳಿಸಿದರು.