ಅಮೆರಿಕದ 6 ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕ ತೆಗೆದುಹಾಕಿದ ಭಾರತ

India has removed additional tariffs on 6 US products

Update: 2023-09-08 16:27 GMT

ಸಾಂದರ್ಭಿಕ ಚಿತ್ರ.| PTI 

ಹೊಸದಿಲ್ಲಿ: ಕಡಲೆ, ಅವರೆ ಕಾಳು ಮತ್ತು ಸೇಬು ಸೇರಿದಂತೆ ಅಮೆರಿಕದ ಸುಮಾರು ಆರು ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕವನ್ನು ಭಾರತ ತೆಗೆದುಹಾಕಿದೆ. ಭಾರತದ ಉಕ್ಕು ಮತ್ತು ಕೆಲವು ಅಲ್ಯೂಮಿನಿಯಮ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ಅಮೆರಿಕ ತೆಗೆದುಕೊಂಡ ನಿರ್ಧಾರಕ್ಕೆ ಪ್ರತಿಯಾಗಿ 2019ರಲ್ಲಿ ಈ ಹೆಚ್ಚುವರಿ ಸುಂಕವನ್ನು ಭಾರತ ವಿಧಿಸಿತ್ತು.

ಭಾರತವು 2019ರಲ್ಲಿ ಅಮೆರಿಕದ 28 ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿತ್ತು. ಕಡಲೆ, ಅವರೆ ಕಾಳು, ಸೇಬು, ಸಿಪ್ಪೆ ಸಹಿತ ವಾಲ್ನಟ್, ಹಸಿ ಮತ್ತು ಒಣಗಿದ ಬಾದಾಮಿ ಹಾಗೂ ಸಿಪ್ಪೆ ಸಹಿತ ಬಾದಾಮಿ ಮುಂತಾದ ಅಮೆರಿಕದ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕಿರುವುದಾಗಿ ಹಣಕಾಸು ಸಚಿವಾಲಯವು ಸೆಪ್ಟಂಬರ್ 5ರಂದು ಹೊರಡಿಸಿದ ಅಧಿಸೂಚನೆಯೊಂದು ತಿಳಿಸಿದೆ.

ಜಿ20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಭೇಟಿ ನೀಡುವುದಕ್ಕೆ ಪೂರ್ವಭಾವಿಯಾಗಿ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಶೃಂಗ ಸಮ್ಮೇಳನವು ಸೆಪ್ಟಂಬರ್ 9 ಮತ್ತು 10ರಂದು ನಡೆಯಲಿದೆ. ಅದಕ್ಕೂ ಮುನ್ನ, ಅಂದರೆ ಶುಕ್ರವಾರ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ದ್ವಿಪಕ್ಷೀಯ ಸಭೆ ನಡೆಯುತ್ತದೆ.

ಪ್ರಧಾನಿ ಮೋದಿ ಜೂನ್ ನಲ್ಲಿ ಅಮೆರಿಕಕ್ಕೆ ಸರಕಾರಿ ಭೇಟಿ ನೀಡಿದ್ದಾಗ, ವಿಶ್ವ ವ್ಯಾಪಾರ ಒಪ್ಪಂದ (WTO)ಕ್ಕೆ ಸಂಬಂಧಿಸಿದ ಆರು ವಿವಾದಗಳನ್ನು ಕೊನೆಗೊಳಿಸಲು ಹಾಗೂ ಅಮೆರಿಕದ ಕೆಲವು ಉತ್ಪನ್ನಗಳ ಮೇಲಿನ ಪ್ರತೀಕಾರಾತ್ಮಕ ಸುಂಕಗಳನ್ನು ತೆಗೆದುಹಾಕಲು ಉಭಯ ದೇಶಗಳು ನಿರ್ಧರಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News