"ಭಾರತವು ವೈವಿಧ್ಯಮಯ ಧರ್ಮಗಳ ನಾಡು": ನೀಟಾದ ಗಡ್ಡ ಇರಿಸಿ ಕರ್ತವ್ಯಕ್ಕೆ ಹಾಜರಾಗಲು ಮುಸ್ಲಿಂ ಪೊಲೀಸರಿಗೆ ಅನುಮತಿಯಿದೆ ಎಂದ ಮದ್ರಾಸ್ ಹೈಕೋರ್ಟ್
ಚೆನ್ನೈ: ಮದ್ರಾಸ್ ಪೊಲೀಸ್ ಗಜೆಟ್ 1947 ಪ್ರಕಾರ ತಮಿಳುನಾಡಿನಲ್ಲಿ ಮುಸ್ಲಿಂ ಪೊಲೀಸರಿಗೆ ಕರ್ತವ್ಯದಲ್ಲಿರುವಾಗಲೂ ಟ್ರಿಮ್ ಮಾಡಿದ ಮತ್ತು ನೀಟಾದ ಗಡ್ಡ ಉಳಿಸಿಕೊಳ್ಳಲು ಅನುಮತಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಭಾರತವು ವೈವಿಧ್ಯಮಯ ಧರ್ಮಗಳು ಮತ್ತು ಸಂಪ್ರದಾಯಗಳ ನಾಡಾಗಿದೆ ಮತ್ತು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಗಡ್ಡ ಇರಿಸಿಕೊಂಡ ಮುಸ್ಲಿಂ ಉದ್ಯೋಗಿಗಳನ್ನು ಪೊಲೀಸ್ ಇಲಾಖೆ ಶಿಕ್ಷಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎಲ್ ವಿಕ್ಟೋರಿಯಾ ಗೌರಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಮಕ್ಕಾದಿಂದ ವಾಪಸಾದ ನಂತರ ಹಿರಿಯ ಅಧಿಕಾರಿ ಮುಂದೆ ಹಾಜರಾದ ಗಡ್ಡಧಾರಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ಶಿಕ್ಷಿಸಿದ ಪ್ರಕರಣ ಸಂಬಂಧ ಅರ್ಜಿಯ ವಿಚಾರಣೆ ನಡೆಸಿ ಹೊರಡಿಸಲಾದ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ.
2018ರಲ್ಲಿ ಕಾನ್‌ಸ್ಟೇಬಲ್ ಒಬ್ಬರಿಗೆ ಮಕ್ಕಾ ಯಾತ್ರೆ ಕೈಗೊಳ್ಳಲು 31 ದಿನಗಳ ರಜೆ ನೀಡಲಾಗಿತ್ತು. ವಾಪಸ್ ಬಂದ ನಂತರ ಕಾಲಿನಲ್ಲಿ ಉಂಟಾದ ಸೋಂಕಿಗೆ ಚಿಕಿತ್ಸೆಗಾಗಿ ರಜೆ ವಿಸ್ತರಣೆಗೆ ಕಾನ್‌ಸ್ಟೇಬಲ್ ಕೋರಿದ್ದರು. ಆದರೆ ರಜೆ ವಿಸ್ತರಣೆಗೆ ಎಸಿಪಿಯೊಬ್ಬರು ನಿರಾಕರಿಸಿದ್ದೇ ಅಲ್ಲದೆ ತಮ್ಮ ಮುಂದೆ ಗಡ್ಡಧಾರಿಯಾಗಿ ಹಾಜರಾದ ಕಾನ್‌ಸ್ಟೇಬಲ್ ಕ್ರಮವನ್ನು ಪ್ರಶ್ನಿಸಿದ್ದರು.
ಮದ್ರಾಸ್ ಪೊಲೀಸ್ ಗಜೆಟ್‌ಗೆ ವಿರುದ್ಧವಾಗಿದೆ ಎಂದು ಹೇಳಿ ಗಡ್ಡ ಏಕೆ ಇರಿಸಿದ್ದೀರಿ ಎಂದು ಪ್ರಶ್ನಿಸಿ ಕಾನ್‌ಸ್ಟೇಬಲ್ ಅವರಿಂದ ಡಿಸಿಪಿ ವಿವರಣೆ ಕೋರಿದ್ದರು.
ನಂತರ ಕಾನ್‌ಸ್ಟೇಬಲ್ ವಿರುದ್ಧ ಗಡ್ಡ ಇರಿಸಿಕೊಂಡಿದ್ದಕ್ಕೆ ಹಾಗೂ 31 ದಿನಗಳ ರಜೆಯ ನಂತರವೂ 20 ದಿನಗಳ ವಿಸ್ತರಣೆ ಕೇಳಿದ್ದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಲಾಗಿತ್ತು.
2021ರಲ್ಲಿ ಕಾನ್‌ಸ್ಟೇಬಲ್‌ನ ವೇತನ ಹೆಚ್ಚಳವನ್ನೂ ಪೊಲೀಸ್ ಆಯುಕ್ತರು ತಡೆಹಿಡಿದಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಕದ ತಟ್ಟಿದ್ದರು.
ಈ ಶಿಕ್ಷೆಯ ಬಗ್ಗೆ ಹೈಕೋರ್ಟ್ ತನ್ನ ಆಕ್ಷೇಪ ವ್ಯಕ್ತಪಡಿಸಿ ಅದನ್ನು ವಜಾಗೊಳಿಸಿದೆ. ಎಂಟು ವಾರಗಳೊಳಗಾಗಿ ಕಾನೂನಿನ ಅನುಸಾರ ಹೊಸ ಆದೇಶ ಹೊರಡಿಸುವಂತೆಯೂ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.