ಇಂತಹ ವಿಷಯಗಳಲ್ಲಿ ಭಾರತ ಎಂದಿಗೂ ಯುದ್ಧ ಮಾಡಿಲ್ಲ: ಇಸ್ರೇಲ್-ಹಮಾಸ್ ಯುದ್ಧದ ಕುರಿತು ಮೋಹನ್ ಭಾಗವತ್
ಹೊಸದಿಲ್ಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಂತಹ ವಿಷಯಗಳ ಬಗ್ಗೆ ಭಾರತ ಎಂದಿಗೂ ಹೋರಾಟ ಅಥವಾ ಯುದ್ಧವನ್ನು ಮಾಡಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.
ನಾಗ್ಪುರದ ಶಾಲೆಯೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ವರ್ಷಗಳ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, “ಈ ದೇಶದಲ್ಲಿ ಎಲ್ಲಾ ಪಂಗಡಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಧರ್ಮ ಮತ್ತು ಸಂಸ್ಕೃತಿ ಇದೆ. ಅದೇ ಹಿಂದೂ ಧರ್ಮ. ಇದು ಹಿಂದೂಗಳ ದೇಶ. ಅದರರ್ಥ ನಾವು ಇತರ ಎಲ್ಲ (ಧರ್ಮಗಳನ್ನು) ತಿರಸ್ಕರಿಸುತ್ತೇವೆ ಎಂದಲ್ಲ. ಒಮ್ಮೆ ಹಿಂದೂ ಎಂದು ಹೇಳಿದರೆ ಮುಸಲ್ಮಾನರಿಗೂ ರಕ್ಷಣೆ ಇದೆ ಎಂದು ಹೇಳುವ ಅಗತ್ಯವಿಲ್ಲ. ಹಿಂದೂಗಳು ಮಾತ್ರ ಇದನ್ನು ಮಾಡುತ್ತಾರೆ. ಭಾರತ ಮಾತ್ರ ಇದನ್ನು ಮಾಡುತ್ತದೆ. ಇತರರು ಇದನ್ನು ಮಾಡಿಲ್ಲ. ” ಎಂದು ಹೇಳಿದ್ದಾರೆ.
"ಉಳಿದಂತೆ ಎಲ್ಲೆಡೆ ಜಗಳ ನಡೆಯುತ್ತಿದೆ. ಉಕ್ರೇನ್ ಯುದ್ಧ, ಹಮಾಸ್-ಇಸ್ರೇಲ್ ಯುದ್ಧದ ಬಗ್ಗೆ ನೀವು ಕೇಳಿರಬೇಕು. ನಮ್ಮ ದೇಶದಲ್ಲಿ, ಅಂತಹ ವಿಷಯಗಳಲ್ಲಿ ಎಂದಿಗೂ ಯುದ್ಧಗಳು ನಡೆದಿಲ್ಲ. ಶಿವಾಜಿ ಮಹಾರಾಜರ ಕಾಲದಲ್ಲಿ ನಡೆದ ಆಕ್ರಮಣವು ಆ ರೀತಿಯದ್ದಾಗಿತ್ತು. ಆದರೆ ನಾವು ಈ ವಿಷಯದಲ್ಲಿ ಯಾರೊಂದಿಗೂ ಯುದ್ಧ ಮಾಡಿಲ್ಲ. ಅದಕ್ಕಾಗಿಯೇ ನಾವು ಹಿಂದೂಗಳು, ” ಎಂದು ಅವರು ಹೇಳಿದರು.