ಫೆಲೆಸ್ತೀನಿಯರ ಮೇಲೆ ಇಸ್ರೇಲ್‌ನ ಆಕ್ರಮಣಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಖಂಡನೆ

Update: 2024-08-25 14:47 GMT

Photo: PTI

ಹೊಸದಿಲ್ಲಿ : ಹಮಾಸ್ ವಿರುದ್ಧದ ಸಮರದಲ್ಲಿ ಇಸ್ರೇಲ್ , ಫೆಲೆಸ್ತೀನಿಯರ ಮೇಲೆ ಭೀಕರ ಆಕ್ರಮಣ ನಡೆಸುತ್ತಿರುವುದನ್ನು ಕಾಂಗ್ರೆಸ್, ಎಸ್ಪಿ, ಜೆಡಿಯು ಹಾಗೂ ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ರವಿವಾರ ಬಲವಾಗಿ ಖಂಡಿಸಿದ್ದಾರೆ. ಫೆಲೆಸ್ತೀನ್ ಸಂತ್ರಸ್ತರಿಗೆ ಶಾಂತಿ ಹಾಗೂ ನ್ಯಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಹೊಸದಿಲ್ಲಿಯಲ್ಲಿ ರವಿವಾರ ಫೆಲೆಸ್ತೀನಿಯರ ಪರವಾಗಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ, ಆಪ್ ಸಂಸದ ಸಂಜಯ್ ಸಿಂಗ್, ಜೆಡಿಯು ನಾಯಕ ಕೆ.ಸಿ.ತ್ಯಾಗಿ ಈ ಬಗ್ಗೆ ಜಂಟಿ ಹೇಳಿಕೆ ನೀಡಿದ್ದಾರೆ. ಫೆಲೆಸ್ತೀನ್ ಪರ ಸಂಘಟನೆ ಅಲ್-ಕುದ್ಸ್‌ನ ಸಾಂಸದಿಕರ ಲೀಗ್‌ನ ಮಹಾಕಾರ್ಯದರ್ಶಿ ಮೊಹಮ್ಮದ್ ಮುಕ್ರಂ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.

ನಾಗರಿಕರನ್ನು ಗುರಿಯಿರಿಸಿ ಆಕ್ರಮಣ ನಡೆಸುವ ಮೂಲಕ ಇಸ್ರೇಲ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆಯೆಂದು ಬಲಾವಿ ಆರೋಪಿಸಿದರು. ಗಾಝಾದ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಮೃತಪಟ್ಟವರಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ಅವರು ಹೇಳಿದರು.

ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಮಣವನ್ನು ಹಾಗೂ ಫೆಲೆಸ್ತೀನಿಯರ ಮಾರಣಹೋಮವನ್ನು ತಾವು ಒಕ್ಕೊರಲಿನಿಂದ ಖಂಡಿಸುವುದಾಗಿ ವಿವಿಧ ಪಕ್ಷಗಳ ನಾಯಕರು ಸಭೆಯ ಬಳಿಕ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬರ್ಬರ ದಾಳಿಯು ಮಾನವೀಯತೆಗೆ ಆಗಿರುವಂತಹ ಅಪಮಾನ ಮಾತ್ರವಲ್ಲ ಅಂತಾರಾಷ್ಟ್ರೀಯ ಕಾನೂನು ಹಾಗೂ ನ್ಯಾಯ ಮತ್ತು ಶಾಂತಿಯ ತತ್ವಗಳ ಘೋರ ಉಲ್ಲಂಘನೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. ಫೆಲೆಸ್ತೀನಿಯರ ಹೋರಾಟಕ್ಕೆ ಭಾರತವು ಐತಿಹಾಸಿಕವಾಗಿಯೂ ಬೆಂಬಲ ನೀಡುತ್ತಾ ಬಂದಿರುವುದನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಫೆಲೆಸ್ತೀನ್‌ಗೆ 1988ರಲ್ಲಿ ಮಾನ್ಯತೆ ನೀಡಿದ ಪ್ರಪ್ರಥಮ ಆರಬ್‌ ಯೇತರ ದೇಶ ಭಾರತವಾಗಿದೆ ಹಾಗೂ ಅದು ಫೆಲೆಸ್ತೀನ್ ಜನತೆಯ ಸ್ವಯಂನಿರ್ಧಾರದ ಹಕ್ಕನ್ನು, ಸಾರ್ವಭೌಮತೆಯನ್ನು ಮತ್ತು ಸ್ವಾತಂತ್ರ್ಯವನ್ನು ಸ್ಥಿರವಾಗಿ ಬೆಂಬಲಿಸಿದ ದೇಶವೆಂದು ಹೇಳಿಕೊಳ್ಳಲು ನಾವು ಬೆಮ್ಮೆ ಪಡುತ್ತೇವೆ’’ ಎಂದು ನಾಯಕರು ತಿಳಿಸಿದ್ದಾರೆ.

ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡುವುದನ್ನು ನಿಲ್ಲಿಸುವಂತೆಯೂ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

‘‘ಫೆಲೆಸ್ತೀನ್ ಜನತೆಯ ಜೊತೆ ಏಕತೆಯೊಂದಿಗೆ ನಾವು ನಿಲ್ಲುತ್ತೇವೆ. ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ತ್ವರಿತವಾಗಿ ಜಾರಿಗೊಳಿಸಲು ಕಾರ್ಯಪ್ರವೃತ್ತವಾಗಬೇಕು ಹಾಗೂ ಫೆಲೆಸ್ತೀನ್‌ನಲ್ಲಿ ಈಗ ನಡೆಯುತ್ತಿರುವ ನರಮೇಧದ ಸಂತ್ರಸ್ತರಿಗೆ ನ್ಯಾಯವನ್ನು ಕೊಡಿಸಬೇಕು ಎಂದು ಭಾರತದ ವಿಪಕ್ಷ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News