ಹಬ್ಬದ ಋತುವಿನಲ್ಲಿ 250 ವಿಶೇಷ ರೈಲುಗಳ ಓಡಾಟ | ಭಾರತೀಯ ರೈಲ್ವೇ ಪ್ರಕಟನೆ
ಹೊಸದಿಲ್ಲಿ : ದೀಪಾವಳಿ ಮತ್ತು ಛಾತ್ ಪೂಜೆ ಹಬ್ಬಗಳ ಋತುವಿನಲ್ಲಿ, 200 ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಪಶ್ಚಿಮ ರೈಲ್ವೇ ಪ್ರಕಟಿಸಿದೆ. ಅಕ್ಟೋಬರ್ 29ರಂದು 120ಕ್ಕೂ ಹೆಚ್ಚು ವಿಶೇಷ ರೈಲುಗಳು ಓಡಿವೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.
ಈ ಪೈಕಿ ಸುಮಾರು 40 ರೈಲುಗಳನ್ನು ಮುಂಬಯ ವಿಭಾಗದಲ್ಲಿ ನಿಯೋಜಿಸಲಾಗಿದ್ದು, ಅವುಗಳ ಪೈಕಿ 22 ರೈಲುಗಳು ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಪ್ರಸಿದ್ಧ ತಾಣಗಳಿಗೆ ಹೋಗಲಿವೆ.
ನಿಯಮಿತ ರೈಲುಗಳ ಓಡಾಟಕ್ಕೆ ಹೆಚ್ಚುವರಿಯಾಗಿ ವಿಶೇಷ ರೈಲುಗಳು ಓಡಲಿವೆ ಎಂದು ಭಾರತೀಯ ರೈಲ್ವೇ ತಿಳಿಸಿದೆ. ಹಬ್ಬದ ಋತುವಿನ ಜಂಗುಳಿ ಮತ್ತು ಪ್ರಯಾಣಿಕರ ಬೇಡಿಕೆಗಳ ಹಿನ್ನೆಲೆಯಲ್ಲಿ ನಿಯಮಿತ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಗಿದೆ.
‘‘ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಪೂರೈಸುವ ನಮ್ಮ ಬದ್ಧತೆಯ ಭಾಗವಾಗಿ ಈ ಏರ್ಪಾಡುಗಳನ್ನು ಮಾಡಲಾಗಿದೆ’’ ಎಂದು ಪಶ್ಚಿಮ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದರು.
ದೀಪಾವಳಿ ಮತ್ತು ಛಾತ್ ಪೂಜೆ ಸಂದರ್ಭದಲ್ಲಿ ತಾನು 50 ವಿಶೇಷ ರೈಲುಗಳನ್ನು ಓಡಿಸುತ್ತಿದ್ದೇನೆ ಮತ್ತು 400 ಹೆಚ್ಚುವರಿ ಸೇವೆಗಳನ್ನು ನೀಡುತ್ತಿದ್ದೇನೆ ಎಂದು ಪೂರ್ವ ರೈಲ್ವೇ ಸೋಮವಾರ ಘೋಷಿಸಿದೆ.
ಪೂರ್ವ ರೈಲ್ವೇಯು ವಿಶೇಷ ರೈಲುಗಳ ಸಂಖ್ಯೆಯನ್ನು ಈ ವರ್ಷ 33ರಿಂದ 50ಕ್ಕೆ ಹೆಚ್ಚಿಸಿದೆ ಎಂದು ಅದರ ಸಾರ್ವಜನಿಕ ಸಂಪರ್ಕಾಧಿಕಾರಿ ಕೌಶಿಕ್ ಮಿತ್ರ ಹೇಳಿದ್ದಾರೆ.