ಅರುಣಾಚಲ ಪ್ರದೇಶ | ಅಂತಾರಾಜ್ಯ ಮಕ್ಕಳ ಕಳ್ಳ ಸಾಗಣೆ ಜಾಲ ಭೇದಿಸಿದ ಪೊಲೀಸರು
ಇಟಾನಗರ: ಈಶಾನ್ಯ ರಾಜ್ಯಗಳು, ವಿಶೇಷವಾಗಿ ಅರುಣಾಚಲ ಪ್ರದೇಶದ ಬಾಲಕಿಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆ ಜಾಲವನ್ನು ಭೇದಿಸುವಲ್ಲಿ ಅರುಣಾಚಲ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ರವಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಳ್ಳಸಾಗಣೆ ಜಾಲದಿಂದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದ್ದು, ಈ ಸಂಬಂಧ ಅರುಣಾಚಲ ಪ್ರದೇಶ ಹಾಗೂ ದಿಲ್ಲಿಯಿಂದ ಐವರನ್ನು ಬಂಧಿಸಲಾಗಿದೆ ಎಂದು ಇಟಾನಗರದ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ಹೇಳಿದ್ದಾರೆ.
ಜೂನ್ 10ರಂದು 15 ಹಾಗೂ 16 ವರ್ಷದ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಇಟಾನಗರ ಮಹಿಳಾ ಪೊಲೀಸ್ ಠಾಣೆಯು ಮಾಹಿತಿ ಸ್ವೀಕರಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತು ಎಂದು ಅವರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯರನ್ನು ಪಾಪುಮ್ ಪರೆ ಜಿಲ್ಲೆಯ ಚಿಂಪು ಗ್ರಾಮದ ನಿವಾಸವೊಂದರಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಪೂರ್ವ ಕೆಮೆಂಗ್ ಜಿಲ್ಲೆಯ 15 ವರ್ಷದ ಬಾಲಕಿಗೆ ಆಮಿಷವೊಡ್ಡಿ ದಿಲ್ಲಿಗೆ ಕರೆದೊಯ್ದಿದ್ದ ಆರೋಪಿಗಳು, ನಂತರ ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದ್ದರು. ಕುರುಂಗ್ ಕುಮೆ ಜಿಲ್ಲೆಯ ಮತ್ತೊಬ್ಬ ಬಾಲಕಿಯನ್ನು ದಿಲ್ಲಿಗೆ ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆಯುತ್ತಿದ್ದಾಗ, ಆ ಬಾಲಕಿಯನ್ನು ರಕ್ಷಿಸಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಕಳೆದ 15 ದಿನಗಳಿಂದ ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವರ ಬಂಧನವಾಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.