ಪಾಕಿಸ್ತಾನದ ಐಎಸ್ಐ ಬೆಂಬಲಿತ ಭಯೋತ್ಪಾದಕ ದಾಳಿಯನ್ನು ಭೇದಿಸಿದ ಪಂಜಾಬ್ ಪೊಲೀಸರು
ಚಂಡೀಗಢ : ಪಾಕಿಸ್ತಾನದ ಐಎಸ್ಐ ಬೆಂಬಲಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಭಯೋತ್ಪಾದಕ ದಾಳಿಯ ಸಂಚನ್ನು ಭೇದಿಸಲಾಗಿದೆ ಎಂದು ಶುಕ್ರವಾರ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್, "ಮಹತ್ವದ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನದ ಐಎಸ್ಐ ಬೆಂಬಲಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಪ್ರಾಯೋಜಿತ ಭಯೋತ್ಪಾದಕ ದಾಳಿಯ ಸಂಚನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಚಂಬಲ್ ನಿವಾಸಿಯಾದ ವಿದೇಶದಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್ ಗುರ್ದೇವ್ ಸಿಂಗ್ ಅಲಿಯಾಸ್ ಜೈಸೆಲ್ ಅಲಿಯಾಸ್ ಪೆಹಲ್ವಾನ್ ಮೂಲಕ ಈ ಭಯೋತ್ಪಾದಕ ದಾಳಿಯನ್ನು ಅನುಷ್ಠಾನಗೊಳಿಸಲಾಗಿತ್ತು" ಎಂದು ಹೇಳಿದ್ದಾರೆ.
ಗುಪ್ತಚರ ಇಲಾಖೆಯ ಸುಳಿವಿನ ಮೇರೆಗೆ ಅಮೃತಸರ ನಿವಾಸಿ ಜಶನ್‌ಸಿಂಗ್ ಹಾಗೂ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಓರ್ವ ಅಪ್ರಾಪ್ತ ಬಾಲಕನನ್ನು ಸೆರೆ ಹಿಡಿಯಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
"ವಿಚಾರಣೆಯ ಸಂದರ್ಭದಲ್ಲಿ, ನವೆಂಬರ್ 23, 2024ರಂದು ಅಜ್ನಲ ಪೊಲೀಸ್ ಠಾಣೆಯಲ್ಲಿ ಸುಧಾರಿತ ಸ್ಫೋಟಕ ಸಾಮಾಗ್ರಿಗಳನ್ನು ಇರಿಸಿದ್ದೆವು ಹಾಗೂ ಇನ್ನಿತರ ದಾಳಿಗಳನ್ನು ನಡೆಸಿದ್ದೆವು ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ" ಎಂದು ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಕೈಬಾಂಬುಗಳು, ಒಂದು ಪಿಸ್ತೂಲು ಹಾಗೂ ಒಂದು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಅಮೃತಸರದಲ್ಲಿನ ರಾಜ್ಯ ವಿಶೇಷ ಕಾರ್ಯಾಚರಣೆ ಘಟಕದಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
"ರಿಂದಾ, ಹ್ಯಾಪಿ ಪಸ್ಸಿಯ ಹಾಗೂ ಗುರ್ದೇವ್ ಜೈಸ್ವಾಲ್‌ರ ಸಂಪೂರ್ಣ ಜಾಲವನ್ನು ಹೊರಗೆಳೆಯಲು ತನಿಖೆ ಪ್ರಗತಿಯಲ್ಲಿದೆ" ಎಂದು ಅವರು ಹೇಳಿದ್ದಾರೆ.