ಇಸ್ರೇಲ್-ಹಮಾಸ್ ಸಂಘರ್ಷ: ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಿ ಸುನಕ್ ನಡುವೆ ಚರ್ಚೆ

Update: 2023-11-04 16:32 GMT

Photo: twitter/narendramodi

ಹೊಸದಿಲ್ಲಿ,ನ.4: ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಶುಕ್ರವಾರ ದೂರವಾಣಿಯಲ್ಲಿ ಮಾತುಕತೆಗಳನ್ನು ನಡೆಸಿದ್ದು,ಪಶ್ಚಿಮ ಏಶ್ಯಾದಲ್ಲಿನ ಬೆಳವಣಿಗೆಗಳು ಮತ್ತು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಕುರಿತು ಚರ್ಚಿಸಿದರು.

ಭಯೋತ್ಪಾದನೆ, ಹದಗೆಡುತ್ತಿರುವ ಭದ್ರತಾ ಸ್ಥಿತಿ ಮತ್ತು ನಾಗರಿಕರ ಜೀವಹಾನಿಗಳ ಬಗ್ಗೆ ಉಭಯ ನಾಯಕರು ತೀವ್ರ ಕಳವಳಗಳನ್ನು ವ್ಯಕ್ತಪಡಿಸಿದರು. ಪ್ರಾದೇಶಿಕ ಶಾಂತಿ,ಭದ್ರತೆ,ಸ್ಥಿರತೆ ಮತ್ತು ನಿರಂತರ ಮಾನವೀಯ ನೆರವಿನ ಅಗತ್ಯವನ್ನು ಅವರು ಒಪ್ಪಿಕೊಂಡರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿಯಾಗಿ ಒಂದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಮೋದಿಯವರು ಸುನಕ್‌ರನ್ನು ಅಭಿನಂದಿಸಿದರು ಮತ್ತು ಪರಸ್ಪರ ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು ಎಂದು ಹೇಳಿಕೆಯು ತಿಳಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ,‘ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜೊತೆ ಮಾತುಕತೆಗಳನ್ನು ನಡೆಸಿದ್ದೇನೆ. ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಮಾರ್ಗಗಳನ್ನು ಚರ್ಚಿಸಿದೆವು ಮತ್ತು ಪಶ್ಚಿಮ ಏಶ್ಯಾದಲ್ಲಿನ ಪರಿಸ್ಥಿತಿಯ ಕುರಿತು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯಿಸಿಕೊಂಡೆವು. ಭಯೋತ್ಪಾದನೆ ಮತ್ತು ಹಿಂಸೆಗೆ ಜಾಗವಿರಬಾರದು ಎಂದು ನಾವು ಒಪ್ಪಿಕೊಂಡಿದ್ದೇವೆ ’ಎಂದು ಹೇಳಿದ್ದಾರೆ.

ನಾಗರಿಕರ ಸಾವು ತೀವ್ರ ಕಳವಳಕಾರಿಯಾಗಿದೆ. ಪ್ರಾದೇಶಿಕ ಶಾಂತಿ,ಭದ್ರತೆ, ಸ್ಥಿರತೆ ಮತ್ತು ನಿರಂತರ ಮಾನವೀಯ ನೆರವಿಗಾಗಿ ಶ್ರಮಿಸುವ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.

ವ್ಯಾಪಾರ,ಹೂಡಿಕೆ,ನವೀನ ತಂತ್ರಜ್ಞಾನ,ರಕ್ಷಣೆ,ಭದ್ರತೆ,ಆರೋಗ್ಯ ಇತ್ಯಾದಿ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಮಗ್ರ ವ್ಯೆಹಾತ್ಮಕ ಪಾಲುದಾರಿಕೆಯ ಬಲವರ್ಧನೆಗೆ ಮುಂದುವರಿಯುವ ತಮ್ಮ ಬದ್ಧತೆಗಳನ್ನು ಉಭಯ ನಾಯಕರು ಪುನರುಚ್ಚರಿಸಿದರು ಎಂದು ಹೇಳಿಕೆಯು ತಿಳಿಸಿದೆ.

ಪರಸ್ಪರ ಸಂಪರ್ಕದಲ್ಲಿರಲು ಉಭಯ ನಾಯಕರು ಒಪ್ಪಿಕೊಂಡರು ಮತ್ತು ದೀಪಾವಳಿ ಶುಭಾಶಯಗಳನ್ನು ಪರಸ್ಪರ ವಿನಿಮಯಿಸಿಕೊಂಡರು ಎಂದೂ ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News